ಕೊಲ್ಕತ್ತಾ, ಮಾ ೨೦, ಭಾರತೀಯ ಫುಟ್ಬಾಲ್ ದಿಗ್ಗಜ, ತಂಡದ ಮಾಜಿ ನಾಯಕ ಪ್ರದೀಪ್ ಕುಮಾರ್ ಬ್ಯಾನರ್ಜಿ (೮೩) ಶುಕ್ರವಾರ ನಿಧನರಾದರು.
ಕಳೆದ ಕೆಲವು ದಿನಗಳಿಂದ ಹೃದ್ರೋಗದಿಂದ ಬಳಲುತ್ತಿದ್ದ ಅವರು ಶುಕ್ರವಾರ ಕೋಲ್ಕತ್ತಾದಲ್ಲಿ ಕೊನೆಯುಸಿರೆಳೆದರು. ಕಾಲ್ಚೆಂಡು ಆಟಗಾರನಾಗಿ ತಾಯ್ನಾಡಿಗೆ ಅದೆಷ್ಟೋ ಸ್ಮರಣೀಯ ಜಯಗಳನ್ನು ತಂದುಕೊಟ್ಟಿದ್ದ ಬ್ಯಾನರ್ಜಿ, ನಂತರ ಭಾರತೀಯ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದರು. ೧೯೩೬ ರಲ್ಲಿ ಜನಿಸಿದ್ದ ಬ್ಯಾನರ್ಜಿ ೮೪ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ೬೫ ಗೋಲುಗಳನ್ನು ಗಳಿಸಿದರು. ೧೯೬೨ ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಬ್ಯಾನರ್ಜಿ ಪ್ರಮುಖ ಪಾತ್ರ ವಹಿಸಿದ್ದರು.
ಅಷ್ಟು ಮಾತ್ರವಲ್ಲದೆ, ೧೯೬೦ರಲ್ಲಿ ರೋಮ್ ಒಲಿಂಪಿಕ್ಸ್ ನಲ್ಲಿ ಫ್ರೆಂಚ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಪರವಾಗಿ ಒಂದೇ ಗೋಲು ಗಳಿಸಿ ಪಂದ್ಯ ಡ್ರಾ ಆಗಲು ಕಾರಣ ಕರ್ತರಾಗಿದ್ದರು. ರೋಮ್ ಒಲಿಂಪಿಕ್ಸ್‌ನಲ್ಲಿ ಪಿ.ಕೆ. ಬ್ಯಾನರ್ಜಿ ಭಾರತದ ತಂಡದ ನಾಯಕರಾಗಿ ಹೊಣೆ ಹೊತ್ತಿದ್ದರು. ಪಿ.ಕೆ. ಬ್ಯಾನರ್ಜಿ ನಿಧನ ಇಡೀ ಕ್ರೀಡಾ ಜಗತ್ತನ್ನು ವಿಷಾದದಲ್ಲಿ ಮುಳುಗಿಸಿದೆ. ಈ ಅಪ್ರತಿಮ ಆಟಗಾರನ ನಿಧನಕ್ಕೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಂತಾಪ ಸೂಚಿಸಿದ್ದಾರೆ. ಬ್ಯಾನರ್ಜಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಯಾನರ್ಜಿ ಅವರೊಂದಿನ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. ಬ್ಯಾನರ್ಜಿ ಇಬ್ಬರು ಹೆಣ್ಣುಗಳನ್ನು ಅಗಲಿದ್ದಾರೆ. ಅವರ ಕಿರಿಯ ಸಹೋದರ ಪ್ರಸೂನ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಸಂಸದರಾಗಿದ್ದಾರೆ.