ಹುಟ್ಟುಹಬ್ಬದಂದು ಮಾದಕ ವಸ್ತು ಸೇವಿಸಿ ಇಬ್ಬರ ಸಾವು: ಮೆಡಿಕಲ್ ಸ್ಟೋರ್ ಮಾಲೀಕ ಬಂಧನ

ಬೆಂಗಳೂರು, ನ.22 :  ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾದಕ ವಸ್ತುಗಳ ಜೊತೆಗೆ ಮತ್ತು ಬರುವ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆಗೆ ಸಂಬಂಧಿಸಿ, ಮಾತ್ರೆ ನೀಡಿದ ಮೆಡಿಕಲ್ ಸ್ಟೋರ್ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. 

ರಾಜಾಜಿನಗರದ ಮನ್ದೀಪ್ ಫಾಮರ್ಾ ಮೆಡಿಕಲ್  ಸ್ಟೋರ್ನ ಮಾಲೀಕ ಮನೀಷ್ ಕುಮಾರ್ (36) ಬಂಧಿತ ಆರೋಪಿ. ರಾಜಾಜಿನಗರದ  4ನೇ  ಬ್ಲಾಕ್ನ ವಾಸಿಯಾಗಿದ್ದ ಮನೀಷ್ ಕುಮಾರ್, ಮೋದಿ ಆಸ್ಪತ್ರೆಯ ಸಿಗ್ನಲ್ ಬಳಿ ಮನ್ದೀಪ್  ಫಾಮರ್ಾ ಎಂಬ ಔಷಧಿ ಅಂಗಡಿ ನಡೆಸುತ್ತಿದ್ದ. ಕಾನೂನುಬಾಹಿರವಾಗಿ ಟೈಡಾಲ್  ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಟೈಡಾಲ್ ಮಾತ್ರೆಯನ್ನು  ಪುಡಿಮಾಡಿಕೊಂಡು ಸಿರಂಜ್ಗೆ ಡಿಸ್ಟಲ್ ವಾಟರ್ಗೆ ಸೇರಿಸಿ ಸಿರಂಜ್ಗೆ ತುಂಬಿಸಿಕೊಂಡು  ನಶೆ ಬರಲು ಚುಚ್ಚಿಕೊಂಡಿದ್ದ ಕೋದಂಡರಾಮಪುರದ ಅಭಿಲಾಷ್ ಹಾಗೂ ಗೋಪಿ  ಮೃತಪಟ್ಟಿದ್ದರು.  

ತೀವ್ರ ಅಸ್ವಸ್ಥನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಹಾನ್ ಎಂಬಾತ ವಿಚಾರಣೆಯ ವೇಳೆ ಪೊಲೀಸರಿಗೆ ಮಾತ್ರೆ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.