ಬೆಂಗಳೂರು, ಜ 17, ಬೆಂಗಳೂರು ನಗರದ ಪುರಭವನದ ಬಳಿ ಕಳೆದ ಡಿ. 22ರಂದು ನಡೆದ ಸಿಎಎ ಪರ ಸಮಾವೇಶ ಸಂದರ್ಭದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಕಲಾಸಿಪಾಳ್ಯಂ ಪೊಲೀಸರ ತಂಡ ಯಶಸ್ವಿಯಾಗಿ ಭೇದಿಸಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರು ಆರ್‌ಟಿನಗರ ನಿವಾಸಿಗಳಾದ ಇರ್ಫಾನ್ ಅಲಿಯಾಸ್ ಮುಹಮ್ಮದ್ ಇರ್ಫಾನ್ , ಸೈಯದ್ ಅಕ್ಬರ್ ಅಲಿಯಾಸ್ ಮೆಕ್ಯಾನಿಕ್ ಅಕ್ಬರ್, ಸನಾ, ಲಿಂಗರಾಜಪುರಂನ ಸೈಯದ್ ಸಿದಿಕಿ, ಕೆ.ಜಿ.ಹಳ್ಳಿಯ ಅಕ್ಬರ್ ಅನ್ವರ್ ಬಾಷಾ, ಶಿವಾಜಿನಗರ ಸಾದಿಕ್ ಅಮೀನ್ ಅಲಿಯಾಸ್ ಸೌಂಡ್ ಅಮೀನ್ ಬಂಧಿತ ಆರೋಪಿಗಳು.ಆರೋಪಿಗಳು ಪೂರ್ವಯೋಜಿತ ತಂತ್ರ ರೂಪಿಸಿ ಅಂದು ಬೆಳಗ್ಗೆ 5.30ಮತ್ತು ರಾತ್ರಿ 8ರಂದು ಸಿಎಎ ಸಭೆಯಲ್ಲಿ ಭಾಗವಹಿಸಿ ಅಲ್ಲಿ ಭಾಷಣ ಮಾಡಿದವರನ್ನು ಕೊಲೆ ಮಾಡಬೇಕೆಂದು ಯೋಜನೆ ರೂಪಿಸಿದ್ದರು. ಗುಂಪಿನ ಮೇಲೆ ಮೊದಲು ಕಲ್ಲು ಎಸೆದು ನಂತರ ಮುಖಂಡರ ಮೇಲೆ ಹಲ್ಲೆ ನಡೆಸಿ ಮೋಟಾರ್ ಬೈಕಿನಲ್ಲಿ ತೆರಳಬೇಕೆಂದು ನಿರ್ಧರಿಸಿದ್ದರು. ಆದರೆ ಇವರ ತಂತ್ರವಿಫಲವಾದಾಗ ಕಾವಿ ಧರಿಸಿದ್ದ ಅರುಣ್ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿ ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿ ಬೈಕಿನಲ್ಲಿ ಆರೋಪಿಗಳು ಬಿಡದಿವರೆಗೆ ತೆರಳುತ್ತಾರೆ. ಅಲ್ಲಿ ಬಟ್ಟೆಗಳನ್ನು ಬದಲಾಯಿಸಿ ಕೆ.ಆರ್.ಪುರಂ ಕೆರೆ ಹತ್ತಿರ ಹೆಲ್ಮೆಟ್ ಎಸೆದು ಅಲ್ಲಿಂದ ಪರಾರಿಯಾಗುತ್ತಾರೆ. ಆರ್‌ಎಸ್‌ಎಸ್ ಹಿಂದೂ ಮುಖಂಡರನ್ನೇ ಎಸ್‌ಡಿಪಿಐ ಟಾರ್ಗೆಟ್ ಮಾಡಿದ್ದರು. ಡಿ 22ರಂದು ನಡೆದ ಸಿಎಎ ಪರ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದರು.ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಂಡ ರಚಿಸಿ 700 ಡಿವಿಆರ್ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆಬೀಸಿ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಪೊಲೀಸರ ಕರ್ತವ್ಯ ನಿಷ್ಠೆಗೆ ಅಭಿನಂದನೆ ಸಲ್ಲಿಸಿದರು.
ಡಿ 23ರಂದು ಖುದ್ದೂಸ್ ಸಾಬ್ ಮಸೀದಿಯಲ್ಲಿ ಎಸ್‌ಡಿಪಿಐ ಸಭೆ ಸೇರಲು ನಿರ್ಧರಿಸಿದ್ದರು. ಎಸ್‌ಡಿಪಿಐನವರಿಗೆ ನಗರದಲ್ಲಿ ಗಲಭೆ ಎಬ್ಬಿಸಲು ಪ್ರತಿ ತಿಂಗಳು ಹತ್ತು ಸಾವಿರ ಹಣ ಬರುತ್ತಿತ್ತು. ಅವರಿಗೆ ಹಣ ಎಲ್ಲಿಂದ ಹೇಗೆ ಬರುತ್ತಿದೆ ಎನ್ನುವುದನ್ನು ಪತ್ತೆ ಮಾಡೇ ಮಾಡುತ್ತೇವೆ. ಆರೋಪಿಗಳ ಪತ್ತೆಗೆ ಸಾರ್ವಜನಿಕರು ಸಹಕರಿಸಿದ್ದಾರೆ. ಆರೋಪಿಗಳ ಪ್ರತಿಯೊಂದು ಹೆಜ್ಜೆಯೂ ಸಿಸಿಟಿವಿ ಮೊಬೈಲ್ ನೆಟ್‌ವರ್ಕ್‌ನಲ್ಲಿ ದಾಖಲಾಗಿದೆ. ಬೆಂಗಳೂರು ನಗರ ಸುರಕ್ಷಿತವಾಗಿದೆ. ಯಾರೂ ನಮ್ಮ ಕಣ್ಣು ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಈ ಕಿಡಿಗೇಡಿಗಳ ಕಾರ್ಯಸೂಚಿ ಗಲಭೆಗೆ ತರಬೇತಿ, ಹಲ್ಲೆ, ಪ್ರಾಣತೆಗೆಯುವುದೇ ಆಗಿದೆ. ಎಲ್ಲಾ ಆರೋಪಿಗಳು ನಮ್ಮ ಪೊಲೀಸ್ ಕಸ್ಟಡಿಯೊಳಗೆ ಇದ್ದಾರೆ. ಎಸ್‌ಡಿಪಿಐ ಹಲ್ಲೆ ಕುರಿತು ಎಸ್‌ಐಟಿ ತನಿಖೆ ರಚಿಸಲಾಗುವುದು. ಆ್ಯಂಟಿ ಟೆರರ್ ಸ್ಕ್ವಾಡ್‌ಗೆ ವಹಿಸಲಾಗಿದೆ. ಇವರು ಬಟ್ಟೆ ಮೇಲೆ ಬಟ್ಟೆ, ಹೆಲ್ಮೆಟ್ ಮೇಲೆ ಹೆಲ್ಮೆಟ್ ಧರಿಸಿ ಓಡಾಡಿದ್ದರು. ಇವರ ಪರವಾಗಿ ಎಸ್‌ಡಿಪಿಐನ ವಕೀಲರೇ ಜಾಮೀನು ಸಲ್ಲಿಸಲು ಬಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಈ ಆರೋಪಿಗಳಿಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಭಾಸ್ಕರ್ ರಾವ್ ವಿವರಿಸಿದರು.
ಜ.26 ರಂದು ಎಲ್ಲಾ ಕಡೆ ಪೊಲೀಸ್ ಹದ್ದುಗಾವಲಿದೆ. 90 ಸಾವಿರ ಪೊಲೀಸರು ಬೆಂಗಳೂರು ನಗರದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಮಿಳುನಾಡು ಪೊಲೀಸರಾಗಲೀ ಮಹಾರಾಷ್ಟ್ರ ಪೊಲೀಸರಾಗಲೀ, ಕೇರಳ ಕರ್ನಾಟಕ ಪೊಲೀಸರಾಗಲೀ ಎಲ್ಲರೂ ಒಂದೇ. ಪೊಲೀಸರೆಲ್ಲ ಪೊಲೀಸರೇ. ಎಲ್ಲಾ ಪೊಲೀಸರು ಮಾಡುವುದು ತನಿಖೆಯೆ. ಯಾವ ಸಮಯದಲ್ಲಿ ವಿವರ ನೀಡಬೇಕು. ಪತ್ರಿಕೆಗಳಿಗೆ ಸಂದರ್ಭ ಬಂದಾಗ ಮಾಹಿತಿ ನೀಡುತ್ತೇವೆ ಎಂದರು.ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ತಮಿಳುನಾಡಿನಲ್ಲಿ ಆರೋಪಿ ಒಬ್ಬ ಪರಾರಿಯಾಗಿದ್ದಾಗ ಕರ್ನಾಟಕ ಪೊಲೀಸರು ಸಹಕರಿಸಿದ್ದಾರೆ. ಹಾಗೇಯೇ ನಮ್ಮ ತನಿಖೆಗೂ ಇತರೆ ರಾಜ್ಯಗಳ ಪೊಲೀಸರು ಸಹಕರಿಸಿದ್ದು ಇದೆ ಎಂದರು.