ದಸರಾ ಉತ್ಸವ ಹಿನ್ನೆಲೆ; ನೀತಿ ಸಂಹಿತೆ ವಿನಾಯ್ತಿಗೆ ಮೈಸೂರು ಜಿಲ್ಲಾಧಿಕಾರಿ ಮನವಿ

ಮೈಸೂರು, ಸೆ. 22    ದಸರಾ ಉತ್ಸವದ ಹಿನ್ನೆಲೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಮೈಸೂರು ಜಿಲ್ಲೆಯ ಇತರೆಡೆ ಚುನಾವಣಾ ನೀತಿ ಸಂಹಿತೆಯಿಂದ ವಿನಾಯ್ತಿ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. 

ಅನರ್ಹ ಶಾಸಕರಿಂದ ತೆರವಾಗಿರುವ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪ ಚುನಾವಣೆ ಘೋಷಣೆಯಾಗಿದ್ದು, ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಪೂರ್ಣ ಜಿಲ್ಲೆಗೆ ನೀತಿ ಸಂಹಿತೆ ಅನ್ವಯವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ದಸರಾ ಹಬ್ಬದ ಹಿನ್ನೆಲೆಯಲ್ಲಿ ನೀತಿ ಸಂಹಿತೆಯಿಂದ ವಿನಾಯ್ತ ನೀಡಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಅವರು,  ಪ್ರಸ್ತುತ, ಯಾವುದೇ ಸಚಿವರು ಇಲ್ಲವೇ ಜನಪ್ರತಿನಿಧಿಗಳು ಅಧಿಕೃತ ಸಭೆಗಳನ್ನು ನಡೆಸಲು ಅವಕಾಶವಿಲ್ಲ. ಅವರು ಜಿಲ್ಲೆಯಲ್ಲಿ ಕಚೇರಿಯ ವಾಹನಗಳನ್ನು ಕೂಡ ಬಳಸುವಂತಿಲ್ಲ.  ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಆದರೆ, ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದರು. 

ರಾಜ್ಯ ಚುನಾವಣಾ ಆಯೋಗ ಶನಿವಾರ 15 ವಿಧಾನಸಭಾ ಕ್ಷೇತ್ತಗಳಿಗೆ ಉಪಚುನಾವಣೆ ಘೋಷಿಸಿದ್ದು, ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ನೀತಿ ಸಂಹಿತೆ ಘೋಷಣೆಯಾಗಿದೆ. 

ಆದರೆ, ನೀತಿ ಸಂಹಿತೆಯಿಂದ ದಸರಾ ಉತ್ಸವ ಮತ್ತು ನೆರೆ ಪೀಡಿತ ಉತ್ತರ ಕರ್ನಾಟಕ ಭಾಗದ ಜನರಿಗೆ ಪರಿಹಾರ ವಿತರಣಾ ಯೋಜನೆಗಳನ್ನು ಹೊರಗಿಡಲಾಗಿದೆ. 

ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಪ್ರತಿ ವರ್ಷ ನಡೆಯುವ ಯಾವುದೇ ಹಬ್ಬಗಳನ್ನು ತಡೆಹಿಡಿಯಲಾಗುವುದಿಲ್ಲ. ಅಭ್ಯರ್ಥಿಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಅನುಮತಿ ಕೇಳಿದರೆ ನೀಡಲಾಗುತ್ತದೆ. ಆದರೆ, ರಾಜಕೀಯ ಚಟುವಟಿಕೆ ನಡೆಸುವಂತಿಲ್ಲ ಎಂದಿದ್ದಾರೆ.