ಈಶ ನಿನ್ನ ಚರಣಭಜನೆ ಆಸೆಯಿಂದ ಮಾಡುವೆನು
ದೋಷರಾಶಿ ನಾಶಮಾಡೊ ಶ್ರೀಶ ಕೇಶವ
ಓಂ ಕೇಶವಾಯ ಸ್ವಾಹಾ ||
ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ
ನಾರಾಯಣಸ್ವಾಹಾ |
ಶೋಧಿಸೆನ್ನ ಭವದಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನಬಾಧೆ ಬಿಡಿಸೋ ಮಾಧವ
ಮಾಧವ ಸ್ವಾಹಾ ||
ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ
ಗೋವಿಂದಾಯ ನಮಃ ||
ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೊ ವಿಷ್ಣುವೇ
ವಿಷ್ಣುವೇ ನಮಃ ||
ಹೀಗೆ ಸಂಧ್ಯಾವಂದನೆ ಮಾಡುವ ಬ್ರಾಹ್ಮಣರಿಗಾಗಲಿ, ಅಥವಾ ಜನಿವಾರ ಹಾಕಿದ ಇನ್ನಾವದೇ ಕ್ಷತ್ರಿಯ ಜನಾಂಗಕ್ಕಾಗಲಿ ಆಚಮನ ಮಾಡುವಾಗ “ಓಂ ಕೇಶವ ಸ್ವಾಹಾ ಽ ನಾರಾಯಣಾಯ ಸ್ವಾಹಾ ಽ ಮಾಧವಾಯ ಸ್ವಾಹಾ ಽ ಗೋವಿಂದಾಯ ನಮಃ ಽಽ ವಿಷ್ಣುವೇ ನಮಃ | ಹೀಗೆ ಮುಂದುವರೆದು ಮಧುಸೂದನಾಯ ನಮಃ | ದಿಂದ ಶ್ರೀ ಕೃಷ್ಣಾಯ ನಮಃ || ದ ವರೆಗೆ ಪುಟ್ಟಿಸಲುಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನು | ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ | 24 ನುಡಿಗಳನ್ನು ನಂತರ ಕೊನೆಯಲ್ಲಿ ನಿತ್ಯ ಸಂಧ್ಯಾವಂದನೆ ಮಾಡಬೇಕೆಂಬುದಕ್ಕೆ “ಸತ್ಯವಾದ ನಾಮಗಳನ್ನು ನಿತ್ಯದಲ್ಲಿ ಪಠಿಸುವವರಿಗೆ ಽ ಅರ್ತಿಯಿಂದ ಸಲಹುವನು ಕರ್ತೃ ಕೇಶವ/ ಎನ್ನುತ್ತ ಮತ್ತೆ ಹೇಳುತ್ತಾನೆ ಕನಕ ಹಿ “ಮರೆಯದಲೇ ಹರಿಯನಾಮ ಬರೆದು ಓದಿ ಕೇಳ್ದವರಿಗೆ ಕರೆದು ಮುಕ್ತಿಕೊಡುವ ನೆಲೆಯಾದಿ ಕೇಶವ ಎಂದು ಎರಡು ನುಡಿಗಳನ್ನು ರಚಿಸಿ ಶ್ರೀ ಸಾಮಾನ್ಯರಿಗೂ ಗಾಯತ್ರಿ ಮಂತ್ರದ ಅರಿವು ಮೂಡಿಸಿದ, ದಾಸವರೇಣ್ಯರಲ್ಲಿ ಶ್ರೇಷ್ಠರೆನಿಸಿದ ಅಪರೋಕ್ಷ ಜ್ಞಾನಿ ಕನಕದಾಸರು, ಅಗಮ್ಯ ಮಹಿಮೆ ಉಳ್ಳವರು. ಮಹಾ ಜ್ಞಾನಿಗಳು. ಹರಿಸ್ಮರಣೆಯಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡ, ಕಾಗಿನೆಲೆಯ ಆದಿಕೇಶವನ ಅನನ್ಯ ಭಕ್ತಿಯ ಧೀಮಂತ ಸಂತಶ್ರೇಷ್ಠರು.
ಶಿಗ್ಗಾಂವ ತಾಲೂಕಿನ ಬಾಡಗ್ರಾಮದವರಾಗಿ ವಿಜಯನಗರ ಅರಸರ ಪ್ರೀತಿಯ ನಾಯಕರಾಗಿ, 28 ಗ್ರಾಮಗಳ ಗೌಡಕಿಯ ಒಡೆಯರಾಗಿ, ಶೂರ, ಧೀರರೆಂಬ ಹೆಗ್ಗಳಿಕೆಗೆ ಪಾತ್ರರಾದ ಕನಕರು ಸಾಮಾನ್ಯರಲ್ಲ. ವೈಷ್ಣವ ಬ್ರಾಹ್ಮಣರಂತೆ ನಾಮಮುದ್ರೆ ಧರಿಸಿ ಮಾಧ್ವಮುನಿಶ್ರೇಷ್ಠ ವ್ಯಾಸರಾಯರ ಶಿಷ್ಯರಾಗಿದ್ದ ಕನಕರು ತಮ್ಮ ಕೀರ್ತನೆಗಳಲ್ಲಿ ತಾನು ಶ್ರೀಮನ್ ನಾರಾಯಣನಾದ ಹರಿಯು ತನ್ನನ್ನು ದಾಸನನ್ನಾಗಿ ಮಾಡಿಕೊಂಡ ಬಗೆಯನ್ನು ಹೇಳಿಕೊಂಡಿದ್ದಾರೆ.
ಅಕಾಲ ಮೃತ್ಯುವಿಗೆ ಈಡಾದ ಮಗ ಹಾಗೂ ತಂದೆ ನಂತರ ತಾಯಿ ಅನೀರೀಕ್ಷಿತವಾಗಿ ಅಗಲಿದ ಪತ್ನಿ ಇದೇ ಸಂದರ್ಭದಲ್ಲಿ ಇವರ ರಾಜ್ಯದ ಮೇಲೆ ವೈರಿಗಳ ದಾಳಿಯಲ್ಲಿ ಶೂರತನದಿಂದ ಹೋರಾಡುತ್ತ ಪ್ರಜ್ಞೆ ತಪ್ಪಿದ ಕನಕರಿಗೆ ಯಾರೋ ಬಂದು ಮೈದಡವಿ ಉಪಚರಿಸಿದಂತೆ ಆಯಿತಂತೆ. ಆಗ ಅವರ ನೋವು ಮನಸ್ಸಿನ ಕ್ಲೇಷ ಮಾಯವಾಯಿತಂತೆ. ಇಂಥ ಅಭೂತಪೂರ್ವ ಆನಂದ ದೊರಕಿದ್ದು ಆದಿಕೇಶವನ ಹೊರತಾಗಿ ಬೇರಾರಿಂದ ಅಲ್ಲವೆಂದು ಮನಗಂಡು ನಾಯಕನಾಗಿ ವೈಭವದಲ್ಲಿ ಮರೆಯಬೇಕಾಗಿದ್ದ ಕನಕರು ವೀರತ್ವವನ್ನು ತ್ಯಜಿಸಿ ವೈರಾಗ್ಯಕ್ಕೆ ವಾಲುತ್ತಾರೆ ಎಂಬುದಕ್ಕೆ ಅವರೇ ತಮ್ಮ ಕೀರ್ತನೆಯಲ್ಲಿ ವ್ಯಕ್ತ ಪಡಿಸಿದ್ದಾರೆ. “ರಣದೊಳಗೆ ಖಂಡ ತುಂಡವ ಮಾಡಿ ಹೋದ ಜೀವಕ್ಕೆ ವೈದ್ಯನ ಸ್ಮರಣೆಯಿಟ್ಟು ಽ ವಾದಗುಣ ಬಿಡಿಸಿ ದಾಸನಮಾಡಿಕೊಂಡೆಯಾ” ದೊರೆತನದ ಬಿಡಿಸಿ ಸುಸ್ಥಿರ ಮಾರ್ಗವನೆ ತೋರಿ ಪರಿಪಾಲಿಸಿದೆನ್ನ ಹರಿಯೆ ಽಽ ಎಂದು ತೋಡಿಕೊಂಡಿದ್ದಾರೆ. ಮತ್ತೆ ಮುಂದುವರಿದು ಹೇಳುವ ಕೀರ್ತನೆ “ಮೊನೆಗಾರ ಧನಿಯೆಂಬ ಧೈರ್ಯವನ್ನು ಬಿಡಿಸಿ ಸೇವಕನ ಮಾಡಿಸಿದೆಯಾ ಹರಿಯೆಽಽ “ಸಿರಿ ಬಿಡಿಸಿ ಹರಿಯ ಹರಸುರರಿಗಳಲ್ಲದಿಹ ಸ್ಮರಣೆ ಜಿಹ್ವೆಗೆ ಬರೆದಿದೆಯಾ ಹರಿಯೆ” ಎಂದು ಹೇಳಿಕೊಳ್ಳುತ್ತ ತನ್ನ ಜೀವನ ದಾರಿ ಬದಲಾದ ಬಗೆಯನ್ನು ತಿಳಿಸಿದ್ದಾರೆ.
ಕನಕದಾಸರು ತನ್ನನ್ನೆ ತಾನು ಅರಿತುಕೊಳ್ಳುವ ದಾಸನಾಗುವ ಕುರಿತು “ದಾಸನಾಗೋ ವಿಶೇಷನಾಗೋ | ಏಸು ಕಾಲಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ...... ತಾನದಲ್ಲ, ತನದಲ್ಲ, ಮುಂದೆ ಬಾಹೋದಲ್ಲ | ಎನ್ನುತ್ತ ಆಶಾ ಕ್ಲೇಶ ದೋಷವೆಂಬೊ ಅಬ್ದಿಯೊಳು ಮುಳುಗಿದವರ ಪಾಶಕೊಳಗಾಗದೆ ನಿರ್ದೋಷಿಯಾಗು - ಸಂತೋಷಿಯಾಗು ಮನವೇ ಎಂದಿದ್ದಾರೆ. ದಾಸನಾಗಿ ಭಗವಂತನ ಜ್ಞಾನದಲ್ಲಿದ್ದು ಮುಕ್ತಿಹೊಂದು ಹಿ ಎಷ್ಟೇ ಯಾತ್ರೆ ಮಾಡಿದರೂ (ಕಂಚಿ, ಕಾಲಹಸ್ತಿ , ವಾರಣಾಸಿ, ತಿರುಗಿದರೂ) ದೋಷನಾಶಕ್ಕಾಗಿ ಗಂಗಾ ಗೋದಾವರಿ, ತುಂಗಭದ್ರೆ, ಯಮುನೆಯಲ್ಲಿ ಮಿಂದರೇನೋ ಜಪತಪ, ನೇಮಂಗಳ ಏಸು ಭಾರೆ ಮಾಡಿದರೆ ಫಲವೇನೋ, ಈ ದೇಹಕ್ಕೆ ತಾಯಿಯಾರೋ, ತಂದೆಯಾರೋ, ಮಡದಿಯಾರೋ, ಮಕ್ಕಳಾರೋ, ಈ ಕಾಯದೊಳು ಸಿಲ್ಕಿ (ದೇಹದೊಳು) ರಘುನಾಮವೆಂಬು ವಸ್ತುವನ್ನು ಬಿಟ್ಟು ಘಾಯವುಳ್ಳ ತನುವಿಗೆ, ನೋಯೋದೇನೋ ಹಿ ಅದಕ್ಕೆ ಈ ದುಷ್ಟ ಜನರೊಡಗೂಡಿ ಗುದ್ದಾಡುವುದಕ್ಕಿಂತ ತ್ರೈಲೋಕ್ಯದ ಪುಣ್ಯದೊಡೆಯದಾಯಕನ್ನ ಹೊಂದಿ ಧನ್ಯನಾಗೋ ಮತ್ತು ಮಾನ್ಯನಾಗೋ ಎಂದಿದ್ದಾರೆ. ಕತ್ತಲೆ ಕಾನನದೊಳು (ಕಗ್ಗತ್ತಲೆಯಲ್ಲಿ ದಟ್ಟವಾದ ಕಾಡಿನಲ್ಲಿ) ಸತ್ಯದ ದಾರಿ ಕಾಣದೆ ತಿರುಗಬೇಡ, ಈ ದೇಹ ಸ್ಥಿರವಾದುದಲ್ಲ. ವ್ಯರ್ಥ ಕಾಲಹರಣ ಮಾಡಬೇಡ, ಛಂದದಿಂದ ಹರಿ ಧ್ಯಾನ ಮಾಡಿ ವಿವೇಕದಲ್ಲಿ ಮುಕುಂದನಿಂದ ಮುಕ್ತಿಯನ್ನು ಬೇಡಬೇಕು, ನಾರಾಯಣ, ಅಚ್ಯತಾನಂತ ಆದಿಕೇಶವನ್ನ ಸಾರಾಮೃತವನ್ನುಂಡು ಭಜಿಸೋ ಲಂಡ ಜೀವವೇ, ನೀ ಭಂಡ ಜೀವನ - ಎಂದು ಈ ಅಸ್ಥಿರವಾದ ದೇಹಕ್ಕೆ ಹೇಳಿಕೊಂಡು ದಾಸರಾಗಿದ್ದಾರೆ.
ಕನಕ ಎಂದರೆ ಕನಕ ! ಉಲ್ಟಾ ಓದಿದರೂ ಕನಕ, ಸೀದಾ ಓದಿದರೂ ಕನಕ. ಅಂದರೆ ಬಂಗಾರ, ಬಂಗಾರದ ಬದುಕೆ ಕನಕ. ಅಂಥ ಜ್ಞಾನದ ಖಣಿ ನಮ್ಮ ಕನಕ. ಈತ ಹರಿದಾಸ - ಎಂಬುದಕ್ಕೆ ಅವನ ಕೀರ್ತನೆಗಳೇ ಸಾಕ್ಷಿ. ಅವನ ಕೃತಿಗಳೇ ಸಾಕ್ಷಿ. ಶ್ರೀ ಕೃಷ್ಣನ ಚರಿತ್ರೆಯನ್ನು ‘ಮೋಹನ ತರಂಗಿಣಿ’ ಎಂಬ ಬೃಹತ್ ಕೃತಿ ಸಾಂಗತ್ಯದ ಛಂದಸ್ಸಿನಲ್ಲಿ ನಿರೂಪಿಸಿದ್ದಾರೆ ಅಪರೋಕ್ಷ ಜ್ಞಾನಿ ಕನಕರು 2699 ಪದ್ಯಗಳಿಂದ ಕೂಡಿದ ಕಥನ ಶೃಂಗಾರ ಕಾವ್ಯವೋ, ಪ್ರೇಮಮಿಲನ ಕಥೆಯೋ ರುಕ್ಮಿಣಿ-ರತಿ-ಉಷೆಯರ ಕುಟುಂಬದ ಕಥೆಯೋ, ಶಿವನ ಕೋಪಕ್ಕೆ ಗುರಿಯಾಗಿ ದಹನ ಹೊಂದಿದ ಕಾಮನ ಕಥೆಯೋ, ಶಂಬರಾಸುರನ, ಅರಮನೆಯಲ್ಲಿ ರತಿ, ಮನ್ಮಥ ರುಕ್ಮಿಣಿಯ ಮಡಿಲಲ್ಲಿ ಪ್ರದ್ಯುಮ್ನನ ಜನನ, ಶಂಬರಾಸುರನ ವಧೆ - ನಂತರ ರಥಿ ಪ್ರದ್ಯಮ್ನರು ದ್ವಾರಕೆಗೆ ಬರುವುದು. ಹೀಗೆ ಕಥೆ ಬಹು ವಿಸ್ತಾರವಾಗಿ ಅನಿರುದ್ಧನ ಜನನ, ಬಾಣಾಸುರನ ಭೋಗವಿಲಾಸ, ಇದೇ ಸಂದರ್ಭದಲ್ಲಿ ಉಷಾ - ಅನಿರುದ್ಧರ ಗುಪ್ತ ಮಿಲನ - ಬಾಣಾಸುರನೊಂದಿಗೆ ಅನಿರುದ್ಧನ ಯುದ್ಧ - ಹರಿಹರರ ಕದನ, ಶ್ರೀ ಕೃಷ್ಣನಿಂದ ಬಾಣಾಸುರನ ಗರ್ವಭಂಗ ಕೊನೆಗೆ ದ್ವಾರಕೆಯಲ್ಲಿ ಉಷಾ ಹಾಗೂ ಅನಿರುದ್ಧರ ಮದುವೆ ಹೀಗೆ ಕಥೆ ಹಲವಾರು ತಿರುವುಗಳೊಂದಿಗೆ ಬೃಹತ್ ಕಥೆಯನ್ನು ಹೆಣೆದಿರುವ ಕನಕರು ಬಲು ಸವಿಯಾದ ರಸಗವಳ ನೀಡಿದ್ದಾರೆ. ಆಗಿನ ಕಾಲದ (16 ನೇ ಶತಮಾನದ) ಜನರ ಆಚಾರ ವಿಚಾರ - ನಡತೆಯನ್ನು ಅಳವಡಿಸಿಕೊಂಡು ರಚಿಸಿದ ಈ ಚರಿತ್ರೆ ಒಂದು ‘ಪಾಡುಗಬ್ಬ” ನಾಡೊಳಗುಳ್ಳ ಜಾಣರು ಜಾಣೆಯರೊಡನಾಡುವ ಸವಿಮಾತು”ಗಳಿಂದ ಕೂಡಿದ ಖಂಡ ಕಾವ್ಯ - ತುಂಬ ಮನೋಜ್ಞವಾಗಿದೆ. ಅಷ್ಟೇ ಶೃಂಗಾರಮಯವಾಗಿದೆ. ಗಂಭೀರತೆಯನ್ನೊಳಗೊಂಡ ಶ್ರೀ ಕೃಷ್ಣ ಚರಿತ್ರೆ ಸೊಗಸಾದ, ಸುಂದರವಾದ ಬಾಯಿ ಚಪ್ಪರಿಸಿ ಮುದದಿಂದ ಕೇಳುವ ಕಾವ್ಯ “ಮೋಹನ ತರಂಗಿಣಿ”. ಇನ್ನು ಕವಿ, ದಾಸ, ಶೂರ ಸೇನಾನಿ ನಾಯಕನಾದ ಕನಕರು ನಳಚರಿತ್ರೆ, ರಾಮ ಧಾನ್ಯ, ಹರಿಭಕ್ತಸಾರ ಅಲ್ಲದೆ ಹಲವಾರು ಕೀರ್ತನೆಗಳನ್ನು, ಉಗಾಭೋಗಗಳನ್ನು ಮತ್ತು ಮುಂಡಿಗೆಗಳನ್ನು ಬರೆದಿದ್ದಾರೆ.
ನಳಚರಿತ್ರೆ ಃ ಇದೊಂದು ಪೌರಾಣಿಕ ಕಥೆ. ಪಾಂಡವರು ವನವಾಸದಲ್ಲಿರುವಾಗ ರೋಮಶ ಮುನಿಗಳು ನಳಮಹಾರಾಜನ ಕಥೆಯನ್ನು ಧರ್ಮಜನಿಗೆ ಹೇಳಿದ್ದು. ವಿದರ್ಭದೇಶದ ರಾಜನ ಮಗಳಾದ ಧಮಯಂತಿ ಹಾಗೂ ನಿಷಧನಗರದ ಅರಸು ನಳಮಹಾಜ ಪರಸ್ಪರ ಪ್ರೀತಿಸಿ (ಹಂಸ ಪಕ್ಷಿಯ ದೌತ್ಯದಿಂದ) ಮದುವೆಯಾಗುತ್ತಾರೆ. ಪೂರ್ವಜನ್ಮದ ಕರ್ಮಫಲದಿಂದ ನಳ - ದಮಯಂತಿಯರಿಗೆ ಅನೇಕ ರೀತಿಯ ಕಾಡುವ ಸಮಯ ಒದಗಿ ಬರುತ್ತದೆ. ದಂಪತಿಗಳು ಕಾಡು ಸೇರುತ್ತಾರೆ. ಅಲ್ಲಿ ನಳರಾಜನಿಗೆ ಕಾರ್ಕೋಟಕ ಸರ್ ಕಡಿಯುತ್ತದೆ. ಅದರಿಂದ ರಾಜನು ಕುರೂಪಿಯಾಗುತ್ತಾನೆ. ಮಡದಿಯನ್ನು ಬಿಟ್ಟು ಹೋದ ಈ ನಳಮಹಾರಾಜ ಯಾರಿಗೂ ಗುರುತು ಸಿಗದಂತೆ ಆಗುತ್ತಾನೆ. ಪತ್ನಿ ದಮಯಂತಿ ಚೇದಿಪಟ್ಟಣದಲ್ಲಿ ಆಶ್ರಯಪಡೆಯುತ್ತಾಳೆ. ಈತ ಋತುಪರ್ಣ ರಾಜನಲ್ಲಿ “ಬಾಹುಕ”ನೆಂಬ ಹೆಸರಿಂದ ಸಾರಥಿಯಾಗುತ್ತಾನೆ. ಕೊನೆಗೆ ದಮಯಂತಿ ತನ್ನ ತಂದೆ ಭೀಮನೃಪಾಲನ ಬಳಿಗೆ (ವಿದರ್ಭ ನಗರಕ್ಕೆ) ಹೋಗುತ್ತಾಳೆ. ಅಲ್ಲಿ ದಮಯಂತಿಯ ಸ್ವಯಂವರ ನಡೆಸಲಾಗುವುದು ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಆಗ ನಳರಾಜಗೆ ಈ ಸುದ್ದಿ ತಲುಪುತ್ತದೆ. ಅಷ್ಟರಲ್ಲಿ ಇವನಿಗೆ ಕಾಲಪುರುಷನ ಅನುಗ್ರಹ ಆಗಿರುತ್ತದೆ. ಮತ್ತೆ ಅಗಲಿದ ದಂಪತಿಗಳು ಒಂದಾಗಿ ಸುಖ ಸಂತೋಷದಿಂದ ನಿಷದ ನಗರಕ್ಕೆ ಹೋಗಿ ರಾಜ್ಯವಾಳುತ್ತಾರೆ ಎಂಬುದರೊಂದಿಗೆ ನಳಚರಿತ್ರೆ ಮುಗಿಯುತ್ತದೆ. ಇದನ್ನು ಬಹು ರಸವತ್ತಾಗಿ ಕನಕರು ನಿರೂಪಿಸಿದ್ದಾರೆ. ಒಂಬತ್ತು ಸಂಧಿಗಳಲ್ಲಿ 481 ಪದ್ಯಗಳಲ್ಲಿ ಬರೆದ ಮೇರು ಕೃತಿ ಇದಾಗಿದೆ.
ಕನಕದಾಸರ ಮತ್ತೊಂದು ಕೃತಿ “ರಾಮಧಾನ್ಯ”. ಇದು ಮೇಲು ಕೀಳುಗಳೆಂಬ ತಾರತಮ್ಯದಿ ಮೆರೆಯುವ ಜಾತಿ ವ್ಯವಸ್ಥೆಯಲ್ಲಿ ಬರೆದ ಕಥೆಯಾಗಿದೆ. “ಭೂಮಿಗಚ್ಚರಿಯಾಗಿ ಪೇಳುವೆನೀ ಕಥೆಯಾ” ಎಂದು ಹೇಳಿದ ದಾಸರು ಅನುಭಾವಿಗಳು, ಧಾನ್ಯಗಳಿಗೆ ಪಾತ್ರವನ್ನು ನೀಡಿ ಅದ್ಭುತ ಕಥೆಯನ್ನಾಗಿ ನಿರೂಪಿಸಿದ ಪರಿ ಅಚ್ಚರಿಯುನ್ನುಂಟುಮಾಡುತ್ತದೆ. “ರಾಗಿ ರಾಮಾಯಣ” ಎಂಬ ಈ ಕಥೆ ಕಾವ್ಯ ಕವನದಲ್ಲಿ ಭಾಮಿನಿ ಷಟ್ಪ್‌ದಿಯಲ್ಲಿ 158 ಪದ್ಯಗಳಲ್ಲಿ ಮೂಡಿ ಬಂದಿದೆ. ವನವಾಸದಲ್ಲಿದ್ದ ಪಾಂಡವರಿಗೆ ಶಾಂಡಿಲ್ಯಮುನಿಗಳು ಹೇಳಿದ ಕಥೆಯನ್ನು ಕನಕದಾಸರು ತಮ್ಮ ವಿಶಿಷ್ಟ್ಯ ಶೈಲಿಯಲ್ಲಿ ಬರೆದಿದ್ದಾರೆ.
ರಾಮ ರಾವಣರ ಯುದ್ಧ ಮುಗಿದ ನಂತರ ಲಂಕೆಯನ್ನು ವಿಭೀಷಣನಿಗೆ ಒಪ್ಪಿಸಿ ರಾಮ, ಲಕ್ಷ್ಮಣ, ಸೀತೆಯರು ಅಯೋಧ್ಯೆಗೆ ಹೋಗುತ್ತಿರುವಾಗ ಮದ್ಯದಲ್ಲಿ ಗೌತಮ ಮಹರ್ಷಿಗಳ ಆಶ್ರಮ ಕಾಣುತ್ತದೆ. ಕೂಡಲೇ ಪುಷ್ಪಕ ವಿಮಾನವನ್ನು ಕೆಳಗಿಳಿಸಿ ಮುನಿಗಳ ದರ್ಶನ ಪಡೆದು ವಿವಿಧ ಭಕ್ಷ್ಯಗಳ ಆತಿಥ್ಯ ಸ್ವೀಕರಿಸುತ್ತಾರೆ. ಅಲ್ಲಿ ಎಲ್ಲ ಧಾನ್ಯಗಳಲ್ಲಿ ರಾಗಿ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಇದನ್ನು ಒಪ್ಪದ ಭತ್ತ ತಾನೇ ಶ್ರೇಷ್ಠ ದೇವರ ನೈವೇದ್ಯಕ್ಕೆ, ಬ್ರಾಹ್ಮಣರ ಭೋಜನಕ್ಕೆ ತಾನೇ ಪ್ರಮುಖ ಎಂದು ವಾದಕ್ಕಿಳಿಯುತ್ತದೆ. ಇದರಿಂದ ಧಾನ್ಯಗಳಲ್ಲಿ ತುರುಸಿನ ವ್ಯಾಜ್ಯವಾಗುವುದು. ಅದನ್ನು ಕಂಡ ಶ್ರೀರಾಮಪ್ರಭು ಆ ಎರಡು ಧಾನ್ಯಗಳ ಶ್ರೇಷ್ಠತೆಯನ್ನು ಸಕಲರಿಗೂ ತಿಳಿಸಲು ಭತ್ತ ಹಾಗೂ ರಾಗಿ ಇಬ್ಬರನ್ನೂ ಆರು ತಿಂಗಳಕಾಲ ಸೆರೆಯಲ್ಲಿ ಇಡಿಸಿ ತಾನು ಸೀತಾ ಲಕ್ಷ್ಮಣ ಸಮೇತನಾಗಿ ಅಯೋಧ್ಯೆಗೆ ಹೋಗುತ್ತಾನೆ. ಅಲ್ಲಿ ತನ್ನ ಪಟ್ಟಾಭಿಷೇಕ ವಗೈರೆ ಮುಗಿದ ನಂತರ ಗೌತಮ ಋಷಿಗಳ ಆಶ್ರಮದಲ್ಲಿ ರಾಗಿ ಹಾಗೂ ಭತ್ತಗಳನ್ನು ಸೆರೆಯಲ್ಲಿ ಇಡಿಸಿದ ನೆನಪಾಗುತ್ತದೆ. ಕೂಡಲೇ ಹನುಮಂತನನ್ನು ಆಶ್ರಮಕ್ಕೆ ಕಳಿಸಿ ಆ ಇಬ್ಬರನ್ನು (ಭತ್ತ ಹಿ ರಾಗಿಗಳನ್ನು) ಕರೆಯಿಸಿ ದೇವತೆಗಳ ಸಮ್ಮುಖದಲ್ಲಿ ವಿಚಾರಣೆ ನಡೆಸುತ್ತಾನೆ. ಆರು ತಿಂಗಳಕಾಲ ಕತ್ತಲೆಯ ಅಜ್ಞಾತವಾಸದಲ್ಲಿದ್ದ ಭತ್ತ ನಿಸ್ತೇಜನಗೊಂಡಿತ್ತು. ರಾಗಿ ಮಿರಿಮಿರಿ ಮಿಂಚುತಿತ್ತು. ಈ ದೃಶ್ಯವನ್ನು ಕಂಡು ದೇವಲೋಕದ ಅಧಿಪತಿ ಇಂದ್ರನು ‘ರಾಗಿ’ ಶ್ರೇಷ್ಠವೆಂದು ಭತ್ತ ನಿಸ್ಸಾರವೆಂದು ಅದು ಬಹುಕಾಲ ಬಾಳದೆಂದು, ಅದಕ್ಕಿಂತ ಬಡವರ ಧಾನ್ಯವೆಂದು ಕರೆಯಲ್ಪಡುವ ಈ ರಾಗಿ ಅತ್ಯಂತ ಶ್ರೇಷ್ಠವಾದುದೆಂದು ಸಾರಿದನು. ಆಗ ಶ್ರೀರಾಮನು ರಾಗಿಗೆ “ರಾಘವ” ನೆಂದು ಹೆಸರನ್ನಿತ್ತು ಪ್ರಖ್ಯಾತನಾಗೆಂದು ಆಶೀರ್ವದಿಸಿದನು. ಕಳೆಗುಂದಿ ತಲೆ ತಗ್ಗಿಸಿ ನಿಂತ ಭತ್ತಕ್ಕೆ ಸಮಾಧಾನಪಡಿಸಿ ರಾಗಿಯೊಂದಿಗೆ ಹೊಂದಾಣಿಕೆಯಿಂದ ಇರುವಂತೆ ಹೇಳಿ ಎಲ್ಲರನ್ನು ಅವರವರ ಸ್ಥಾನಕ್ಕೆ ಕಳುಹಿಸಿದನು. ಇಷ್ಟು ಕಥೆಯೇ ‘ರಾಮಧಾನ್ಯ’ದ ಕಥೆ.
ಅಪರೋಕ್ಷ ಜ್ಞಾನಿಗಳಾದ ದಾಸರಲ್ಲೇ ಅತ್ಯಂತ ಶ್ರೇಷ್ಠರೆನಿಸಿ ಪುರಂದರದಾಸರು ಕನಕರನ್ನು ಕಂಡರೆ ಎಷ್ಟು ಅಕ್ಕರೆಯೋ ಅಷ್ಟೇ ಅಕ್ಕರೆ ವ್ಯಾಸ ಪೀಠಾಧಿಪತಿ, ಮುನಿಶ್ರೇಷ್ಠರು, ವಿಜಯನಗರವನ್ನು ಕೆಲಕಾಲ ಆಳಿ ಕೃಷ್ಣದೇವರಾಯರ ಬೆನ್ನುಬೇತಾಳ ಹುಣ್ಣನ್ನು ಶಮನಗೊಳಿಸಿ. ಬರದಿಂದ ಬರುವ ಸಿಡಿಲನ್ನು ತಮ್ಮ ಶಾಟಿಲಿ ನೆರಳಿನಿಂದ ತಡೆಹಿಡಿದ ಮಹಾಯೋಗಿ ವ್ಯಾಸ ಮಹರ್ಷಿಗಳು, 16ನೇ ಶತಮಾನದಲ್ಲಿ ಬ್ರಾಹ್ಮಣರಲ್ಲದ ಕನಕನನ್ನು ನಾನಾ ಬಗೆಯಿಂದ ಗೋಳುಹೊಯ್ದುಕೊಳ್ಳುತ್ತಿದ್ದ ಕಾಲದಲ್ಲಿ ಮಠದಲ್ಲಿದ್ದ ದುರಹಂಕಾರಿಗಳನ್ನು ಬಗ್ಗು ಬಡೆಯಲು ವ್ಯಾಸರು ಒಂದು ಪರೀಕ್ಷೆ ನಡೆಸುತ್ತಾರೆ. ಅದನ್ನು ಪುರಂದರ ದಾಸರು ಹೀಗೆ ಕೀರ್ತನೆ ರಚಿಸಿದ್ದಾರೆ.
‘ಕನಕದಾಸನ ಮೇಲೆ ದಯಮಾಡಲು ವ್ಯಾಸ’
ಮುನಿ ಮಠದವರೆಲ್ಲ ದೂರಿಕೊಂಬರೋ ಽಽಪಲ್ಲಽಽ ತೀರ್ಥಕೊಡುವಾಗ ಕನಕನ್ನ ಕರೆಯಲು ಧೂರ್ತರಾಗಿದ್ದ ವಿದ್ವಾಂಸರೆಲ್ಲ ಽ ಸಾರ್ಥಕವಾಯಿತು. ಇವರ ಸಂನ್ಯಾಸಿತನವೆಲ್ಲ ಽ ಪುರ್ತ್ಸಾಗಲೆಂತುನಲು ಯತಿಯು ನಗುತ್ತಿದ್ದನುಽ ಮರುದಿನ ಅವರವರ ಪರೀಕ್ಷಿಸಬೇಕೆಂದು ಽ ಕರೆದು ವಿದ್ವಾಂಸರಾ ಕನಕ ಸಹಿತಽ ಕರದಲಿ ಕದಳಿಯ ಫಲಗಳನೆಕೊಟ್ಟು ಽ ಯಾರಿರದ ಸ್ಥಳದಲಿ ಮೆದ್ದು ಬನ್ನಿರೆನುಲು ಽ ಊರ ಹೊರಗೆ ಹೋಗಿ ಬೇರೆ ಬೇರೆ ಕುಳಿತು ತೋರದಲೆ ಎಲ್ಲರೂ ಮೆದ್ದುಬರಲು ಽ ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ ಽ ಕನಕ ಕದಳಿಫಲವ ತಂದು ಮುಂದಿಟ್ಟು ಽಽ ಡಿಂಭದೊಳು ಶಬ್ದವಾದಾಗಿ ಶ್ರೋತ್ರಗಳಲ್ಲಿ ಽ ಇಂಬಾಗಿ ತತ್ತೆ-್ವಶರೆಲ್ಲ ತುಂಬಿಹರೋ ಽ ತಿಂಬುದು ಹೇಗೆನುತ ವ್ಯಾಸರಾಯನ ಕೇಳೆ ಽ ಸಂಭ್ರಮದ ದಲವರೆಲ್ಲ ಕುಳಿತು ಕೇಳಿದರು ಽಽ ಮಾಣಿಕ್ಯವು ಕೋಡಗದ ಕೈಯಲ್ಲಿ ಇದ್ದಂತೆ ಽ ಕೋಣನಿಗೆ ಕಿನ್ನರಿಯ ಮೀಟಿದಂತೆ ಽಽ ವೇಣುಧ್ವನಿ ಬಧಿರನ ಬಳಿ ಮಾಡಿದಂತೆ ಽ ಕಣ್ಣು ಕಾಣದವಗೆ ಕನ್ನಡಿಯ ತೋರಿದಂತೆ ಽ ನೋಡಿದರೆ ಈ ಕನಕನಾಡುವ ಮಾತುಗಳ ಽ ಮೂಢಜನರರಿಯಬಲ್ಲರೆ ಮಹಿಮೆಯ ಽ ನಾನಾಡಿದಂತೆ ಮಾಡಿಬಿಟ್ಟರು ಇವರಿಗೆ ಽ ನಾಡೆಲ್ಲ ಹುಡುಕಿದರು ಈಡಾರ ಕಾಣೇ ಽ ಕರದಲ್ಲಿ ಮಾರುತಿಯನು ಪಿಡಿದು ಕೇಳುತ್ತಿರಲು ಽ ಅರಿಯದ ಜ್ಞಾನದಲಿ ಪೇಳುತಿರಲು ಽ ತ್ವರದಿ ಕನಕನು ಬಂದು ವಾಸುದೇವನ ರೂಪ ಽ ಪರಬೊಮ್ಮ ಪುರಂದರವಿಠ್ಠಲನೆಂದು ಪೇಳಿದನು ಽಽ
ಹೀಗೆ ಕನಕದಾಸರು ಎಲ್ಲೆಲ್ಲಿಯೂ ಭಗವಂತನ ಇರವುವನ್ನು ಅರಿತಿದ್ದರು. ಸಕಲ ಜೀವರಾಶಿಗಳಲ್ಲಿ ಶ್ರೀಹರಿ ಇದ್ದಾನೆ ಎಂಬುದನ್ನು ನಿರೂಪಿಸಿದರು. ಯಾರೂ ಇಲ್ಲದ ಸ್ಥಳದಲ್ಲ ಬಾಳೆಹಣ್ಣನ್ನು ತಿಂದು ಬನ್ನಿರೆಂದು ವ್ಯಾಸರು ಹೇಳಿದ್ದು ಕನಕನ ವಿಧ್ವತ್ವವನ್ನು ಸಕಲರಿಗೂ ತಿಳಿಯುವಂತೆ ಮಾಡಲು ಹಾಗೂ ವಿದ್ವಾಂಸರ ಗರ್ವ ಶಮನಮಾಡಲು ಆಗಾಗ ಮಠದಲ್ಲಿ ಈ ರೀತಿ ನಡೆಯುತ್ತಿದ್ದವು. ಶ್ರೀಮನ್‌ನಾರಾಯಣನು ಶೇಷರೂಪದಿಂದ ಬಂದದ್ದು, ನಾಯಿಯ ರೂಪದಿಂದ ಕಾಣಿಸಿಕೊಂಡದ್ದು. ಕನಕ-ಪುರಂದರ-ವ್ಯಾಸರಿಗೆ ಮಾತ್ರ ತಿಳಿದಿತ್ತು. ಕನಕದಾಸರ ಕೃತಿಗಳಲ್ಲಿ ಇನ್ನೊಂದು ಅತ್ಯಂತ ಮಹತ್ವದ ಕೃತಿ ಎಂದರೆ ‘ಹರಿಭಕ್ತಿಸಾರ’ ಇದರಲ್ಲಿ ದಾಸರು ತಮ್ಮ ಭಕ್ತಿಯ ಗಂಗಾನದಿಯನ್ನು ಉಕ್ಕಿ ಹರಿಸಿದ್ದಾರೆ. ಅದರಲ್ಲಿ ಮಿಂದು ಎದ್ದಿದ್ದಾರೆ. ತಾವು ಭಗವಂತನ ಹೃದಯ ಕಮಲದಲ್ಲಿ ಒಂದಾಗಿ ಸುಖವನ್ನು ಅನುಭವಿಸಿ - ಅನುಭಾವದ ಅಮೃತವನ್ನು ನಮ್ಮಂಥವರಿಗೆ ಕೊಡುಗೈ ದೊರೆಯಾಗಿ ಉಣಬಡಿಸಿದ್ದಾರೆ. ಹರಿಭಕ್ತಿ ಸಾರದ ಅಂತಿಮ ಗುರಿ ‘ಮುಕ್ತಿ’ 110 ಪದ್ಯಗಳಿಂದ ನಿರ್ಮಿತಗೊಂಡ ಈ ಕೃತಿಯಲ್ಲಿ ‘ಹರಿಯೇ ಸರ್ವೋತ್ತಮ’ ಅವನ ಹೊರತು ಇನ್ನಾರೂ ಸರಿಸಾಟಿ ಇಲ್ಲವೆಂಬ ಪ್ರತಿಪಾದಿಸಿದ್ದಾರೆ. ಜೊತೆಗೆ ಆಗಾಗ ಶಿವನನ್ನು ಕುರಿತು ಹಾಡಿ ಹೊಗಳಿದ್ದಾರೆ. ಹರಿ-ಹರರಲ್ಲಿ ಭೇದವಿಲ್ಲವೆಂಬುದನ್ನು ಮನಗಾಣಿಸಿದ್ದಾರೆ. ತಮ್ಮ ವಿದ್ವತ್ತನ್ನೆಲ್ಲ ತಮ್ಮ ನಾಲಿಗೆಯ ಮೂಲಕ ‘ಹರಿಯೇ ನೀನು ಕಾಯೋ, ದೀನ ನಾನು ಸಮಸ್ತ ಲೋಕಧಾನಿ ನೀನು ಽ ಸರ್ವವೂ ನೀನಾಗಿರುವೆ ಕಾಯೋ ನಮ್ಮನು ಅನವರತಾ ಎಂದು ಅನನ್ಯ ಭಕ್ತಿಯಿಂದ ಬೇಡಿಕೊಂಡಿದ್ದಾರೆ.
ಅವರ ಕೀರ್ತನೆಗಳಲ್ಲಿ ಭಕ್ತಿ ಭಾವದ ಪರಾಕಾಷ್ಠತೆ ಇದೆ. ಅಧ್ಯಾತ್ಮದ ಚಿಂತನೆ ಇದೆ. ಸಾಮಾಜಿಕ ಪ್ರಜ್ಞೆ ಇದೆ. ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ ಽ ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುಽ ದಾಯಾದಿ ಬಂಧಗಳ ಬಿಡಲುಬಹುದು ಽ ರಾಯ ಮುನಿದರೆ ರಾಜ್ಯವ ಬಿಡಬಹುದು ಽ ಕಾಯ ಜಪಿತ ನಿನ್ನಡಿಯ ಬಿಡಲಾಗದು ಽಽ ಒಡಲು ಹಸಿದರೆ ಅನ್ನವ ಬಿಡಬಹುದು ಽ ಪಡೆದ ಕ್ಷೇತ್ರವ ಬಿಟ್ಟು ಹೊರಡಲುಬಹುದು ಽ ಮಡದಿ ಮಕ್ಕಳ ಕಡೆಗೆ ತೊಲಗಿಸಬಹುದು ಽ ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗುದು ಽ ಪ್ರಾಣವನು ಪರರಿಗೆ ಬೇಡಿದರೆ ಕೊಡಬಹುದು ಮಾನಾಭಿಮಾನ ತಗ್ಗಿಸಬಹುದು ಽ ಪ್ರಾಣದಾಯಕನಾದ ಆದಿಕೇಶವರಾಯ ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು
ಎಂದು ಶ್ರೀಹರಿಯನ್ನು ಒಂದು ಕ್ಷಣವೂ ಬಿಡಲಾಗದೆಂದು ಅನನ್ಯ ಭಕ್ತಿಯಿಂದ, ಸಮರಾ್ಣ ಭಾವದಿಂದ ಭಗವಂತನಲ್ಲಿ ಬಿನ್ನವಿಸಿಕೊಂಡಿದ್ದಾರೆ. ಮತ್ತೆ ಮತ್ತೆ ಕೇಳುತ್ತಾರೆ “ನೀ ಮಾಯೆಯೊಳಗೋ ಽ ನಿನ್ನೊಳು ಮಾಯೆಯೋ ಽ ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೇ ಽ ಬಯಲೊಳಗೆ, ಆಲಯವೋ ಆಲಯದೊಳಗೆ ಬಯಲೋ -ಇವೆರಡು ಸೇರಿ ನಯನದೊಳಗೋ - ಬುದ್ಧಿ - ಸವಿ/ಸಕ್ಕರೆ -ಜಿಹ್ವೆ/ಮನಸ್ಸು/ ಇವೆಲ್ಲ ನಿನ್ನೊಳಗೋ/ - ಕುಸುಮ - ಗಂಧದೊಳಗೋ ಗಂಧ ಕುಸುಮದೊಳಗೋ ಇವೆರಡು ಸೇರಿ ಆಘ್ರಾಣದೊಳಗೋ ಅಸಮಭವ ಕಾಗಿನೆಲೆಯಾದಿ ಕೇಶವರಾಯ ಉಸುರಲೆನ್ನಳವಲ್ಲ ಎಲ್ಲವು ನಿನ್ನೊಳಗೋ ಹರಿಯೇ” ಅಂದರೆ ಎಲ್ಲದರಲ್ಲಿ ನೀನೆ ಆಗಿರುವೆ. ಸಕಲ ಚರಾಚರಗಳಲ್ಲಿ, ತುಂಬಿರುವೆ ಎಂಬುದಕ್ಕೆ ಕನಕರ ಕೀರ್ತನೆ ಹೇಳುತ್ತದೆ. (ವಚನಕಾರ ತೆರದಿ) ತನುವು ನಿನ್ನದು ಜೀವ ನಿನ್ನದು - ಎನ್ನುತ್ತ ನನ್ನದೆನ್ನುವುದು ಯಾವುದೂ ಇಲ್ಲ. ಎಲ್ಲವೂ ನಿನ್ನದಾಗಿದೆ. ನಾವು ನಿಮಿತ್ತ ಮಾತ್ರರು. ಆಗುಹೋಗುಗಳಿಗೆಲ್ಲ ನೀನೆ ಕಾರಣಕರ್ತನು, ಸಕಲಕ್ಕೆಲ್ಲ ಸೂತ್ರಧಾರ ನೀನಾಗಿರುವೆ. ಅನುದಿನವು ಬರುವ ಸುಖದುಃಖ ನಿನ್ನದಯ್ಯ ಸವಿನುಡಿ ವೇದಪುರಾಣ ಶಾಸ್ತ್ರಗಳ ಕಿವಿಗೊಟ್ಟು ಕೇಳುವ ಕಥೆ ನಿನ್ನದು ಎಂದೆನ್ನುತ್ತ - ಮಾಯಾಪಾಶದ ಬಲೆಯೊಳಗೆ ಸಿಲುಕಿರುವ / ಕಾಯ ಪಂಚೇಂದ್ರಿಯಂಗಳು ನಿನ್ನವು / ಕಾಯಜಪಿತ ಕಾಗಿನೆಲೆಯಾದಿ ಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ ಎಂದು ಹೇಳುತ್ತ ತಮ್ಮ ಮನಸ್ಸಿಗೆ ತಾವೇ ಸಮಾಧಾನದ ಕೀರ್ತನೆ “ತಲ್ಲಣಿಸದಿರು ಕಂಡ್ಯಾ ತಾಳು ಮನವೇ” ಎಲ್ಲದಕ್ಕೂ ಶ್ರೀ ಹರಿ ಇದ್ದಾನೆ ಎಂದು ತಮ್ಮ ಮನಕ್ಕೆ ತಮ್ಮ ತನುವಿಗೆ, ಮನಸ್ಸಿಗೆ ಹೇಳಿಕೊಂಡಿದ್ದಾರೆ.
ಅಗಮ್ಯ ಜ್ಞಾನ, ವೈರಾಗ್ಯದ ಜೊತೆಗೆ ಸಾಮಾಜಿಕ ಪ್ರಜ್ಞೆ, ಪರಿಸರದ ದಟ್ಟ ಅನುಭವ ಕನಕರಿಗೆ ಬಹಳವಾಗಿತ್ತು ಎಂಬುದಕ್ಕೆ “ಸತ್ಯವಂತರ ಸಂಗವಿರಲು ತೀರ್ಥವೇತಕೆ ಽ ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಏತಕೆ ಽ ಗುರು ಹಿರಿಯರ ಅರಿಯದವನ ಽ ಮಾತು ಕೇಳದೆ ಮಲೆತು ನಡೆವ ಮಕ್ಕಳೇತಕೆ ಽ ಭೀತನಾಗಿ ಓಡಿ ಬರುವ ಬಂಟನೇತಕೆ ಽ ಪ್ರೀತಿಯಿಂದ ಎಡೆಯನ್ನಿಕ್ಕದ ಊಟವೇತಕೆ ಽ ಸೋತ ಹೆಣ್ಣಿಗೆ ಓತು ನಡೆಯದ ಪುರುಷನೇತಕೆ ಽ ತಾನು ಉಣ್ಣದ ಪರರಿಗಿಕ್ಕದ ಽ ಧನವಿದ್ದೇತಕೆ ಽ ಮಾನಹೀನನಾಗಿ ಬಾಳ್ವ ಮನುಜನೇತೆಕೆ ಽ ಜ್ಞಾನವಿಲ್ಲದೆ ನೂರುಕಾಲ ಬದುಕಲೇತಕೆ ಽ ಸನ್ನೆಯರಿತು ನಡೆಯದಿರುವ ಸತಿಯು ಎತಕೆ ಽ ಮನ್ನಣ್ಣೆಯನ್ನರಿತು ನಡೆಸದಿರುವ ದೊರೆಯು ಏತಕೆ ಽ ಮಾನಿನಿಯ ತೊರೆದಮೇಲೆ ಭೋಗವೇತಕೆ ಽ ನೀತಿ ಅರಿತು ನಡೆಯದಿರುವ ಭಂಟನೇತಕೆ ಽ ಧ್ಯಾನದೊಳಗೆ ಕೃಷ್ಣನಿಲ್ಲದ ತನುವಿದ್ದೇತಕೆ ಚೆನ್ನ ಆದಿಕೇಶವನಿರಲು ದೈವವೇತಕೆ ಽ ಹೀಗೆ ಸಾಮಾನ್ಯ ಜನತೆಗೆ ಮನಮುಟ್ಟುವ ಜಾಗೃತಿ ಮೂಡಿಸುವ ಕೀರ್ತನೆಗಳು ಲವು ಹಿ ‘ದುಷ್ಟ ಜನರ ಸಂಗ ಕೊಡಬ್ಯಾಡ ಹರಿಯೇ’ ಎಂದೆನ್ನುತ್ತ. ಉಂಡ ಮನೆಗೆರಡು ಬಗೆಯುವಾತನ ಸಂಗ ಽ ತಂದೆ ತಾಯ್ಗಳ ಜರಿದು ಬಾಧಿಸುವವನ ಸಂಗ ಽ ರಂಭೆ ಸ್ತ್ರೀಯರ ನೋಡಿ ಮೋಹಿಪನ ಸಂಗ ಽ ಕುಳಿತಿಹ ಸಭೆಯೊಳಗೆ ಕುಹಕಿ ಮಾಡ್ವನ ಸಂಗ ಽ ಕುಲಹೀನರ ಕೂಡೆ ಸ್ನೇಹ ಮಾಡ್ವನ ಸಂಗ ಽ ಗುರು ಸತಿಗೆ ಪರಸತಿಗೆ ಎರಡು ಎಣಿಪನ ಸಂಗ ಽ ರಾಗದ್ವೇಷಾದಿಯಲಿ ಮುಳುಗೇಳುವವನ ಸಂಗ ಕಾಗಿನೆಲೆಯಾದಿ ಕೇಶವ ಬಿಡಿಸೋ ಈ ಭಂಗಾ ಽ ಎಂದಿದ್ದಾರೆ. ದಾಸರು ಹದವರಿತು ಕೀರ್ತನೆಗಳನ್ನು ರಚಿಸಿದರು.
ಈ ಬದುಕು ನೀರ ಮೇಲಿನ ಗುಳ್ಳೆ ಇದಕ್ಕೆ ಅತಿಯಾದ ವ್ಯಾಮೋಹವೇಕೆ? ಎನ್ನುತ್ತ ಽ ಡಿಂಬಿನೊಳು ಪ್ರಾಣವಿರಲು ಕಂಸ್ತೂರಗೊಂಬೆಯಂತೆ ಽ ಎಂದಿದ್ದರೊಂದು ದಿನ ಸಾವು ತಪ್ಪದು ಽ ಹುಟ್ಟುತೇನು ತರಲಿಲ್ಲ ಽ ಹೋಗುತ್ತೇನು ಒಯ್ಯಲಿಲ್ಲ ಽ ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ ಽ ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟಪಟ್ಟು ಪ್ರಾಣ ಽ ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣಲಿಲ್ಲವೋ ಽ ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದು ಕಾಣಲಿಲ್ಲ ಽ ಅಣ್ಣ ತಮ್ಮ ತಾಯಿ-ತಂದೆ ಬಯಸಲಾಗದ ಽಅನ್ನ ವಸ್ತ್ರಭೋಗಿಯಾಗಿ ತನ್ನ ಸುಖದ ಕಾಣಲಿಲ್ಲ ಽ ಮಣ್ಣುಪಾಲು ಆದಮೇಲೆ ಆರಿಗಾಹೋದು? ಽ ಬೆಳ್ಳೆ ಬಂಗಾರಿಟ್ಟುಕೊಂಡು ಒಳ್ಳೆವಸ್ತ್ರ ಹೊದ್ದುಕೊಂಡು ಽ ಅಳ್ಳಾಚಾರಿ ಗೊಂಬೆಯಂತೆ ಆಡಿಹೋಯಿತು ಽ ಹಳ್ಳಹರಿದು ಹೋಗುವಾಗ ನೀರಗುಳ್ಳೆ ಒಡೆಯುವಂತೆ ಽ ಉಳ್ಳಿನ ಪೊರೆಯಂತೆ ಕಾಣೋ ಸಂಸಾರದಾಟವು ಽ ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡೊವರೋ - ಸತ್ತು ಹೋದಮೇಲೆ ನಿಮ್ಮ ಅರ್ಥ (ಹಣ, ಐಶ್ವರ್ಯ) ಯಾರಿಗೆ - ವಾರ್ತೇಕೀರ್ತಿಯೆಂಬೆರಡು ಬಂದುವಯ್ಯ ಸತ್ತಮೇಲೆ | ವಸ್ತು ಪ್ರಾಣನಾಯಕನು ದೊರಕಲಿಲ್ಲವು ಕರ್ತ ಕಾಗಿನೆಲೆಯಾದಿ ಕೇಶವ ನಾರಾಯಣನ ಅರ್ತಿಯಿಂದ ಭಜಿಸಿ ನೀವು ಸುಖವಾಗಿ ಬಾಳಿರೋ - ಎಂದು ಉಪದೇಶ ನೀಡಿದ್ದಾರೆ. ಅಸ್ತಿರವಾದ ಈ ದೇಹವನ್ನು ನಂಬಿ ಹಣ ಹಣವೆಂದು ಹಪಿಸುತ್ತ ಬೇಕಾದಷ್ಟು ಗಳಿಸಿ ಸತ್ತಮೇಲೆ ಅದು ಯಾರಿಗೋ ಆಗುವುದು. ಅದರಿಂದ ನನಗೆ ಏನು ಲಾಭ, ಸತ್ತ ಮೇಲೆ ಬರುವದು ಒಳ್ಳೆಯವನೆಂಬ ಕೀರ್ತಿ ಮಾತ್ರ ಆದುದರಿಂದ ನಾರಾಯಣನ್ನು ಪೂಜಿಸಿ ಸುಖವಾಗಿರುದೇ ಸೂಕ್ತ ಎಂದಿದ್ದಾರೆ.
ಕನಕದಾಸರನ್ನು ಬ್ರಾಹ್ಮಣ ವಿದ್ವಾಂಸರು ಹಾಗೂ ಕೃಷ್ಣನನ್ನು ಪೂಜಿಸುವ ಅರ್ಚಕರು ನಾನಾರೀತಿ ಕಾಡಿದ್ದಾರೆ. ಕೃಷ್ಣನು ಕೂಡ ಅಷ್ಟೇ ರೀತಿ ತನ್ನ ಭಕ್ತನ ಕೀರ್ತಿಯನ್ನು ನಾನಾರೀತಿ ತೋರಿ್ಡಸಿದ್ದಾನೆ. ಉಡುಪಿಯ ಶ್ರೀಕೃಷ್ಣ ಮಠವು ವೈಷ್ಣವರಿಂದ ತುಂಬಿಹೋಗಿತ್ತು. ಅಬ್ರಾಹ್ಮಣನಾದ ಕನಕನನ್ನು ಮಂದಿರದ ಒಳಗೆ ಬಿಡದಿದ್ದಾಗ ಅಲ್ಲದೆ (ಕೃಷ್ಣ ಮೂರ್ತಿಯ ಹೊನ್ನನ ಸರ ಕಳುವಿನ ಆರೋಪ ಕನಕದಾಸರ ಮೇಲೆ ಬಂದು) ಕೃಷ್ಣ ಮಂದಿರ ಹಿಂದಿನ ಗೋಡೆಯ ಆವರಣದಲ್ಲಿಯ ಒಂದು ಕಂಬಕ್ಕೆ ಕಟ್ಟಿ ಬಲಾಢ್ಯ ಜಟ್ಟಿ ಹೊಡೆದು - ಬಡಿದು ಕಳ್ಳನೆಂದು ಒಪ್ಪಿಕೊಳ್ಳುವಂತೆ ಶಿಕ್ಷೆ ನೀಡುವಾಗ) ಆರ್ಥನಾಗಿ, ಅನನ್ಯ ಭಕ್ತಿಯಿಂದ ಶ್ರೀಹರಿಯ ಮೊರೆಹೋಗಿ, ‘ಬಾಗಿಲನು ತೆರೆದು ಸೇವೆಯನ್ನು ಕೊಡು ಹರಿಯೇ ಽ’ ಎಂದು ಬೇಡಿಕೊಳ್ಳುತ್ತ ಕರಿರಾಜ ಕಷ್ಟದಲ್ಲಿ (ಗಜೇಂದ್ರ ಮೋಕ್ಷದಲ್ಲಿ ಆನೆಯ ಕಾಲನ್ನು ಹಿಡಿದ ಮೊಸಳೆಯನ್ನು ಸಂಹರಿಸಿದ ಕೃಷ್ಣನೆ) ಆದಿಮೂಲಾ ಎಂದು ಕರೆಯುವ ಯಮಸುತನ ರಾಣಿಗೆ (ಯಮನ ಮಗನಾದ ಧರ್ಮರಾಜನ ಪತ್ನಿ ದ್ರೌಪದಿಗೆ) ಅಕ್ಷಯವ ನಿಟ್ಟೆ. ನನಗೆ ಈ ಸಮಯದಲ್ಲಿ ಬಂದು ಕಾಪಾಡು ಎಂದು ಪ್ರಾರ್ಥಿಸಲು ಉಡುಪಿಯ ಕೃಷ್ಣನು ಹೊರಳಿ ಹಿಂದಿನ ಗೋಡೆ ಒಡೆದು ಭಕ್ತ ಕನಕರಿಗೆ ದರ್ಶನ ನೀಡುತ್ತಾನೆ. ಆಗ ಅರ್ಚಕರು ವಿದ್ವಾಂಸರು, ರಾಜ ದೂತರು ಪಶ್ಚಾತಾಪ ಪಟ್ಟು ಕನಕರ ಭಕ್ತಿಗೆ ಮರುಳಾಗುತ್ತಾರೆ.
ಹೀಗೆ ಹಲವಾರು ಕೀರ್ತನೆಗಳನ್ನು ರಚಿಸಿದ ಕನಕರಿಗೆ ಯಾವ ಜಾತಿ ಕುಲಗಳಿಲ್ಲ. ಅವರೇ ಹೇಳುವಂತೆ ‘ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಽ
ಜಲವೆ ಸಕಲ ಕುಲಕ್ಕೆ ತಾಯಯಲ್ಲವೆ ಽ ಆ ಜಲದ ಕುಲವನೇನಾದರೂ ಬಲ್ಲಿರಾ ಽ ಎಂದು ಕೇಳಿ ಜಾತಿ, ಮತ, ಪಂಥಗಳ ಗೊಡವೆ ಏಕೆ? ಮಹಾತ್ಮರ, ದಾರ್ಶನಿಕರ, ಬೋಧಕರ ಕುಲವನ್ನು ಅರಸುವುದು ತರವಲ್ಲ. ಕನಕರು ಮ್ಯಾಸ ನಾಯಕರೊ, ಮತ್ತ್ಯಾವ ಜಾತಿಯವರೋ ಅದು ನಮಗೆ ಬೇಕಿಲ್ಲ. ಅವರ ಬೋಧನೆ ಬೇಕು. ಅವರ ತತ್ವಸಿದ್ಧಾಂತ ನಮಗೆ ಬೇಕು. ಅವರ ಉತ್ಕೃಷ್ಟವಾದ ಸಾಹಿತ್ಯ ನಮಗೆ ಬೇಕು. ಇಂದು ಅನೇಕ ವಿದ್ವಾಂಸರ ಅಭಿಪ್ರಾಯಗಳು ಅನೇಕ ನಮಗೆ ಅವು ಬೇಕಾಗಿಲ್ಲ. ಒಟ್ಟಿನಲ್ಲಿ ಕನಕರು ಬಂಗಾರ. ಅದು ಎಲ್ಲಿಂದಲೇ ಬರಲಿ, ಹಟ್ಟಿಯಿಂದ ಬರಲಿ, ಕೋಲಾರದಿಂದ ಬರಲಿ ಅದನ್ನು ಧರಿಸಿಕೊಂಡು ಅಲಂಕಾರದಿಂದ ಮರೆಯಬೇಕು. ಸುಂದರವಾಗಿ ಕಾಣಬೇಕು. ಅಂದರೆ ಅದರ ಉಪಯೋಗದಿಂದ ಸ್ಥಿತಿವಂತರಾಗಬೇಕು ಅಷ್ಟೇ. ಜ್ಞಾನದ ಖಣಿ ಕನಕರು, ಅವರ ಜ್ಞಾನದ ಅಣುವನ್ನಾದರೂ ನಾವು ಗಳಿಸಬೇಕು. ಅಂದರೆ ಅವರ ಜಯಂತಿ ಆಚರಣೆ ಮಾಡಿದ್ದು ಸಾರ್ಥಕ.
|| ಜೈ ಶ್ರೀ ಕೃಷ್ಣ | ಜೈ ದಾಸವರೇಣ್ಯ ||