ಕೃಷಿಯಲ್ಲಿ ಖುಷಿ ಕಂಡ ಸಾಧಕರ ದರ್ಶನ

ರಾಮದುರ್ಗದ ಶ್ರೀ ಸುರೇಶ ಗುದಗನವರ ಅವರದು ನಿತ್ಯನಿರಂತರ ಬರವಣಿಗೆ. ವಿವಿಧ ಪತ್ರಿಕೆಗಳಲ್ಲಿ ದಿನನಿತ್ಯ ಅವರ ಒಂದಿಲ್ಲೊಂದು ಅಂಕಣ ಬರೆಹಗಳು ಇದ್ದೇಇರುತ್ತವೆ. ಅದರಲೂ ವಿವಿಧ ಕ್ಷೇತ್ರಗಳ ಸಾಧಕರ ವಿಶಿಷ್ಟ ಸಾಧನೆಗಳ ಕುರಿತು ಬರೆಯುವದೆಂದರೆ ಅವರಿಗೆ ಬಹಳ ಖುಷಿ. ಅಂತಹ ಎರಡು ಮೂರು ಪುಸ್ತಕಗಳು ಈಗಾಗಲೇ ಪ್ರಕಟವೂ ಆಗಿವೆ.   

ಕೃಷಿ - ಖುಷಿ ಎಂಬ ಈ ಪುಸ್ತಕ ಹೆಸರೇ ಸೂಚಿಸುವಂತೆ  ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಗೈದವರನ್ನು ಪರಿಚಯಿಸುವಂತಹದು. ಇದರಲ್ಲಿ 35 ಲೇಖನಗಳಿದ್ದು ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯವನ್ನೂ ಎತ್ತಿಕೊಂಡಿದ್ದಾರೆ. ಸಾವಯವ ಕೃಷಿ ಸಾಧಕಿ ಲಕ್ಷ್ಮಿ ಲೋಜೂರ, ಮಹಿಳಾ ಉದ್ಯಮಿ ಅಶ್ವಿನಿ ಸರದೇಶಪಾಂಡೆ, ನೈಸರ್ಗಿಕ ಕೃಷಿಯ ಗೋವಿಂದ ರೆಡ್ಡಿ, ಬೆಟ್ಟದ ನೆಲ್ಲಿ ಕೃಷಿಕನ ಯಶೋಗಾಥೆ, ಬರ ನೀಗಿಸಿದ ಪೇರಲ, ಬದುಕು ಕೊಟ್ಟ ಸಾವಯವ ಬೆಲ್ಲ, ಆಡು ಸಾಕಾಣಿಕೆ ಜೀವನಕ್ಕೆ ಬಲ, ಸ್ವಾಲಂಬಿ ಜೀವನಕ್ಕೆ ವಿಳ್ಯದೆಲೆ ಕೃಷಿ, ಬೀಜಗಳ ಮಾತೆ ರಹೀಬಾಯಿ ಪೋಪರೆ, ನೈಸರ್ಗಿಕ ಕೃಷಿಯ ರಾಘವ, ಅರಣ್ಯ ಕೃಷಿಯಲ್ಲಿ ನಿವೃತ್ತ ಅಧಿಕಾರಿ ಹೀಗೆ ಕೃಷಿ ಕ್ಷೇತ್ರದಲ್ಲಿ ಬಗೆಬಗೆಯ ಪ್ರಯತ್ನ ಮಾಡಿ, ಸಾಹಸದಿಂದ, ಶ್ರಮದಿಂದ ಯಶಸ್ಸನ್ನು ಪಡೆದ ಮೂವತ್ತಕ್ಕೂ ಹೆಚ್ಚು ಸಾಧಕರ ಬದುಕಿನ ಚಿತ್ರಣ ಇದರಲ್ಲಿದೆ.   

ಒಂದೆಡೆ ರೈತರ ಆತ್ಮಹತ್ಯೆಯ ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ಇನ್ನೊಂದೆಡೆ ಈ ಬಗೆಯ ಕೃಷಿ ಸಾಧಕರ ಬದುಕನ್ನೂ ನೋಡುತ್ತೇವೆ. ಈ ಸಾಧಕರ ಬಗ್ಗೆ ಬರೆಯುವುದು ಏಕೆ ಇಂದಿನ ಸಂದರ್ಭದಲ್ಲಿ ಮಹತ್ವದ್ದಾಗುತ್ತದೆಂದರೆ ಇಂಥ ಸಾಹಸಿಗಳ ಆದರ್ಶವನ್ನು ತಮ್ಮೆದುರಿಗಿಟ್ಟುಕೊಂಡು ರೈತರು ನಿರಾಶಾವಾದವನ್ನು ಬಿಟ್ಟು ತಾವು ದೃಢ ನಿರ್ಧಾರಕ್ಕೆ ಬಂದು ಲಾಭದಾಯಕವಾದ ಕೃಷಿ ಮಾಡುವಂತಾದರೆ ಬಹಳ ಒಳ್ಳೆಯದು ಅನಿಸುತ್ತದೆ. ಸಮಸ್ಯೆಗಳು ಎಲ್ಲ ಕ್ಷೇತ್ರಗಳಲ್ಲೂ ಇದ್ದೇಇರುತ್ತವೆ. ಮನಸ್ಸು ಗಟ್ಟಿ ಇದ್ದರೆ ಸಾಹಸ ಮತ್ತು ಶ್ರಮಗಳ ಮೂಲಕ ಮೇಲೆದ್ದು ಬರಲು ಸಾಧ್ಯವೆನ್ನುವುದು ಈ ಕೃಷಿಸಾಧಕರ ಬದುಕಿನಿಂದ ಸ್ಪಷ್ಟವಾಗುತ್ತದೆ.  ಮುಖ್ಯವಾಗಿ ಕೃಷಿಯಲ್ಲಿ ಖುಷಿಯನ್ನು ಕಾಣುವವರು ಅದರಲ್ಲಿ ಬರುವ ತೊಂದರೆಗಳನ್ನೂ ಸಹನೆಯಿಂದ ಎದುರಿಸಬಲ್ಲರು. ಅಂತಹ ಮನಸ್ಥಿತಿ ರೂಪಿಸಿಕೊಳ್ಳುವುದು ಅಗತ್ಯ. ಗುದಗನವರ ಅವರ ಈ ಬರೆಹಗಳು ಯುವ ಕೃಷಿಕರಿಗೆ ಸ್ಫೂರ್ತಿದಾಯಕವಾಗಿವೆ. ಆದ್ದರಿಂದ ಕೃಷಿ ಇಲಾಖೆ ಈ ಬಗೆಯ ಪುಸ್ತಕಗಳನ್ನು ತಾನೇ ಖರೀದಿಸಿ ಹಳ್ಳಿಹಳಿಗಳಲ್ಲಿ ಕೃಷಿ ಕಚೇರಿಗಳ ಮೂಲಕ ಹಂಚುವ ಕೆಲಸ ಮಾಡಬೇಕು. ಇಲ್ಲಿನ ಸಾಧಕರ ಕತೆಗಳನ್ನು ಓದಿದರೆ ತಾವೂ ಅದೇ ರೀತಿ ಸಾಧನೆ ಮಾಡಿ ತೋರಿಸಬೇಕೆಂಬ ಉತ್ಸಾಹ ಯುವ ರೈತರಲ್ಲಿ ಉಂಟಾಗಬಹುದಾಗಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈ ಪುಸ್ತಕ ಪಠ್ಯದ ರೂಪದಲ್ಲಿ  ವಿದ್ಯಾರ್ಥಿಗಳಿಗೆ ಓದಲು ಸಿಗುವಂತಾಗಬೇಕು.   

ಸುರೇಶ ಗುದಗನವರ ಅವರನ್ನು ಬಹಳ ಖುಷಿಯಿಂದ ಈಕೃತಿಗಾಗಿ ಅಭಿನಂದಿಸುತ್ತೇನೆ.   

ಪುಟಗಳು: 156; ಬೆಲೆ: 158 ರೂ.   

ಮೊ. ನಂ. 94492 94694. 

- ಎಲ್‌. ಎಸ್‌. ಶಾಸ್ತ್ರಿ 

ಹಿರಿಯ ಸಾಹಿತಿಗಳು, ಪತ್ರಕರ್ತರು 

         ಬೆಳಗಾವಿ  


- * * * -