ದವಸ ಧಾನ್ಯ ತರಲು ಅಭಿಮಾನಿಗಳಿಗೆ ದರ್ಶನ್ ಸೂಚನೆ

ಬೆಂಗಳೂರು, ಜ 17, ಸ್ಟಾರ್ ನಟರ ಜನ್ಮದಿನವನ್ನು ಅಭಿಮಾನಿಗಳು ತಮ್ಮಷ್ಟದಂತೆ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಆದರೆ, ಚಾಲೇಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಸರಳತೆ ದರ್ಶನ್ ಮುಂದುವರೆಸಿದ್ದಾರೆ. ಫೆಬ್ರವರಿ16ರಂದು ದರ್ಶನ್ ಹುಟ್ಟು ಹಬ್ಬ ಇರುವುದರಿಂದ ಹಾರ, ತುರಾಯಿ, ಕೇಕ್ ತರುವ ಬದಲು ಅಕ್ಕಿ ,ಬೇಳೆ, ದವಸ ಧಾನ್ಯ ತರಲು ಡಿ ಬಾಸ್ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಜನ್ಮದಿನದ ನಂತರ ಸಂಗ್ರಹಣೆಯಾದ ಅಕ್ಕಿ, ಧವಸ ಧಾನ್ಯಗಳನ್ನು ಡಿ ಬಾಸ್  ಅನಾಥಾಶ್ರಮಗಳಿಗೆ ತಲುಪಿಸುವ ಯೋಜನೆ ರೂಪಿಸಿದ್ದು, ಈಗಾಗಲೇ ಮೈಸೂರಿನಲ್ಲಿ ದವಸ ಧಾನ್ಯ ಸಂಗ್ರಹಿಸುವ ಕೆಲಸಕ್ಕೆ ದರ್ಶನ್ ಅಭಿಮಾನಿಗಳು ಮುಂದಾಗಿದ್ದಾರೆ.ದರ್ಶನ್  ಕೂಡ ಈ ಕಾರ್ಯಕ್ಕೆ ಚಾಲನೆ ನೀಡಿದ್ದು, ಕೇಕ್, ಹಾರಕ್ಕೆ ಖರ್ಚು ಮಾಡುವ ಹಣದಲ್ಲಿ  ದವಸ-ಧಾನ್ಯ ತೆಗೆದುಕೊಂಡು ಬರುವಂತೆ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.