ಮಾ.18 ರಂದು ಶಹಪುರ ಗ್ರಾಮದಲ್ಲಿ ದರಗಜ್ಜನ ಉರುಸು
ಕೊಪ್ಪಳ 11: ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿಯ ಶಹಪುರ ಗ್ರಾಮದಲ್ಲಿ ಕೋಮು ಸೌಹಾರ್ದತೆಯ ಪ್ರತೀಕವಾದ ಶ್ರೀ ದರಗಜ್ಜನ ಉರುಸು ಇದೇ ಮಾ.18ರಿಂದ ಜರುಗಲಿದೆ. ಶತಮಾನಗಳ ಇತಿಹಾಸ ಹೊಂದಿರುವ ದರಗದ ತಾತನಿಗೆ ಪ್ರತಿವರ್ಷದಂತೆ ಈ ಬಾರಿಯೂ ಇದೇ ಮಾ.18 ರಂದು ಸಂಜೆ 8 ಗಂಟೆಗೆ ಗಂಧ ಹೊರಡುವ ಕಾರ್ಯಕ್ರಮ ಜರುಗಲಿದೆ.
ಮಾ.19 ರಂದು ಬುಧವಾರ ಉರುಸು ಆಚರಿಸಲಾಗುತ್ತದೆ. ಮೊದಲ ದಿನ ಗಂಧ ಹೊರಟ ಬಳಿಕ ರಾತ್ರಿ 10-30 ಗಂಟೆಯಿಂದ ‘ಸಿಡಿದೆದ್ದ ಸಹೋದರರು’ ಅರ್ಥಾತ್ ‘ರಕ್ತ ಕಣ್ಣೀರು’ ಎನ್ನುವ ಸುಂದರ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ಉರುಸ್ ದಿನದಂದು ಸುತ್ತಮುತ್ತಲ ಹಲವಾರು ಗ್ರಾಮಗಳಿಂದ ಆಗಮಿಸುವ ಕಲಾವಿದರು ರಾತ್ರಿಯಿಡೀ ಖವ್ವಾಲಿ ಪದಗಳನ್ನು ಹಾಡಲಿದ್ದಾರೆ. ಪ್ರಾತಃಕಾಲದ ವೇಳೆ ನೀರಿನಲ್ಲಿ ದೀಪ ಉರಿಯುವ ಪವಾಡ ನಡೆಯಲಿದೆ. ಅಂದು ಮಧ್ಯಾಹ್ನ ಉರುಸ್ ಗೆ ಆಗಮಿಸುವ ಸಕಲ ಸದ್ಭಕ್ತರಿಗೆ ಶಹಪುರ ಗ್ರಾಮಸ್ಥರಿಂದ ಅನ್ನದಾಸೋಹ ಕಾರ್ಯಕ್ರಮ ನೆರವೇರಲಿದೆ.ದರಗಜ್ಜನ ಐತಿಹ್ಯ: ಬ್ರಿಟೀಷರ ಕಾಲದಲ್ಲಿ ಗ್ರಾಮದಲ್ಲಿದ್ದರೆನ್ನಲಾದ ಸಂತರೊಬ್ಬರು ಸಿಲ್ವರ್ ತಾತನ ಹೆಸರಿನಲ್ಲಿ ಜನರಿಗೆ ಆಯುರ್ವೇದ, ಆಧ್ಯಾತ್ಮ, ಸೌಹಾರ್ದತೆ ಮತ್ತು ಪಾರಮಾರ್ಥದೊಂದಿಗೆ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಮನುಷ್ಯ ಸಹಜವಾದ ಗುಣಗಳನ್ನು ಹೊಂದಿದ್ದರೂ ಜನರಲ್ಲಿ ಭಕ್ತಿ ಮತ್ತು ಮಮತೆಗಳನ್ನು ಮೂಡಿಸುತ್ತಿದ್ದರು. ಸುದೀರ್ಘ ಜೀವನ ನಡೆಸಿದ್ದ ಅವರ ದೇಹ ತ್ಯಾಗವಾದಾಗ ಗ್ರಾಮಸ್ಥರು ಭಕ್ತಿಯಿಂದ ಅವರನ್ನು ಗ್ರಾಮದ ಈಶಾನ್ಯ ಮೂಲೆಯಲ್ಲಿ ಸಮಾಧಿ ಮಾಡಿದ್ದರು. ಅವರು ಇಹಲೋಕ ತ್ಯಜಿಸಿದ ದಿನದಂದೇ ಉರುಸು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ ಈ ಹಿಂದೆ ಹುಸೇನ್ ಸಾಬ್ ಎನ್ನುವ ವೃದ್ಧರೊಬ್ಬರು 1980-90ರ ದಶಕದವರೆಗೂ ಇದೇ ಹಾದಿಯಲ್ಲಿ ಸಾಗಿ ಗ್ರಾಮದಲ್ಲಿ ಧಾರ್ಮಿಕ ಭಾವನೆಗಳನ್ನು ಮೂಡಿಸುತ್ತಿದ್ದರು. ಅವರ ಬಳಿಕ ಕಾಶೀಂ ಸಾಬ್ ಅವರು ದರಗಾದ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಅವರ ನಿಧನದ ಬಳಿಕ ಅವರ ಪತ್ನಿ ಹಾಗೂ ಪುತ್ರರಾದ ಅಕಬರ ಅಲಿ ಅವರು ಉರುಸ್ ಧಾರ್ಮಿಕ ಆಚರಣೆಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ದರಗದ ಅಜ್ಜನ ಉರುಸ್ ಆಚರಣೆ ವೇಳೆ ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಗಳು ಸಂಭ್ರಮದಿಂದ ಜರುಗುತ್ತಿದ್ದು ಸಾವಿರಾರು ಸದ್ಭಕ್ತರು ಪಾಲ್ಗೊಳ್ಳುತ್ತಾರೆ. ಎಂದಿನಂತೆ ಈ ಬಾರಿಯೂ ಆಗಮಿಸಿ ಸದ್ಭಕ್ತರು ಅಜ್ಜನ ಕೃಪೆಗೆ ಪಾತ್ರರಾಗುವಂತೆ ಗ್ರಾಮದ ಯುವ ಧುರೀಣರಾದ ಮಲ್ಲಿಕಾರ್ಜುನ ಕುರಿ, ನಿಂಗಪ್ಪ ನಾಗಲಾಪುರ, ವೀರಣ್ಣ ಕೋಮಲಾಪುರ, ನಿಂಗಜ್ಜ ಚೌಧರಿ ಮತ್ತು ಮಂಜುನಾಥ ರಾಟಿ ಇನ್ನಿತರರು ಕೋರಿದ್ದಾರೆ.