ದಾಂಡೇಲಿ ಲೆನಿನ್ ರಸ್ತೆ: 19 ದಿನಗಳಿಂದ ವಾಹನಗಳ ಪ್ರವೇಶ ಕಡ್ಡಾಯ ಸ್ಥಗಿತ, ಸ್ಥಳೀಯರ ಆಕ್ರೋಶ

ದಾಂಡೇಲಿ ಲೆನಿನ್ ರಸ್ತೆ: 19 ದಿನಗಳಿಂದ ವಾಹನಗಳ ಪ್ರವೇಶ ಕಡ್ಡಾಯ ಸ್ಥಗಿತ, ಸ್ಥಳೀಯರ ಆಕ್ರೋಶ Dandeli Lenin Road: Mandatory closure of vehicle entry for 19 days, locals outraged

ಲೋಕದರ್ಶನ ವರದಿ 

  ದಾಂಡೇಲಿ  14: ದಾಂಡೇಲಿಯ ಲೆನಿನ್ ರಸ್ತೆಯಲ್ಲಿ 19 ದಿನಗಳಿಂದ ವಾಹನಗಳು ಮನೆಗೇ ಸೆರೆಯಾದ ಸ್ಥಿತಿಯಲ್ಲಿವೆ. ನಗರೋತ್ಥಾನ ಯೋಜನೆಯಡಿ ಇದ್ದ ಕಾಂಕ್ರೀ ಟ್ ಗಟಾರ ಅಗೆದು ಬಿಟ್ಟು ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸ್ಥಳೀಯರು ಆಕ್ರೋಷಗೊಂಡಿದ್ದು, ಅಭಿವೃದ್ದಿಯೇ ಕಿರುಕುಳವಾಗಬಾರದು ಎಂದು ಹೇಳಿದ್ದಾರೆ. ನಗರಗಳ ಮೂಲ ಸೌಕರ್ಯ ಅಭಿವೃದ್ದಿಗಾಗಿ ಜಾರಿಯಾಗುವ ನಗರೋತ್ಥಾನ ಯೋಜನೆಗಳು ಜನಜೀವನ ಸುಧಾರಿಸಲು ಇರಬೇಕಾದರೆ, ದಾಂಡೇಲಿಯಲ್ಲಿ ಅದೇ ಯೋಜನೆ ಈಗ ಸ್ಥಳೀಯ ನಿವಾಸಿಗಳಿಗೆ ಸಂಕಷ್ಟದ ಕಾರಣವಾಗಿದೆ.ದಾಂಡೇಲಿಯ ಲೆನಿನ್ ರಸ್ತೆಯ ಕೆ.ಪಿ.ಸಿ ಕ್ವಾಟ್ರಸ್ ಎದುರಿನ ಪ್ರದೇಶದಲ್ಲಿ ನಗರೋತ್ಥಾನ  ಯೋಜನೆಯಡಿ ಇದ್ದ ಸುಸಜ್ಜಿತ ಕಾಂಕ್ರೀಟ್ ಗಟಾರನ್ನು ಸುಮಾರು 19 ದಿನಗಳ ಹಿಂದೆ ಜೆ.ಸಿ.ಬಿ ಯಂತ್ರದ ಮೂಲಕ ಅಗೆದು ಹಾಕಲಾಗಿದ್ದು, ನಂತರ ಕಾಮಗಾರಿ ಸ್ಥಗಿತಗೊಂಡೊದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಟಾರು ಅಗೆದು ಬಿಟ್ಟ ಪರಿಣಾಮ ಮನೆಗಳ ವಾಹನ (ವಾಹನ ಪ್ರವೇಶ ದಾರಿ ) ಸಂಪೂರ್ಣ ಹಾನಿಗೊಳಗಾಗಿದೆ. ಕಾರು ಹಾಗೂ ದ್ವಿ ಚಕ್ರ ವಾಹನಗಳನ್ನು ಹೊರತೆಗೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ದರು, ಮಕ್ಕಳು ಮತ್ತು ಮಹಿಳೆಯರ ಓಡಾಟಕ್ಕೂ ತೀವ್ರ ತೊಂದರೆ ಉಂಟಾಗಿದೆ. ಸ್ಥಳೀಯರ ಪ್ರಕಾರ ಗುತ್ತಿಗೆದಾರರು ಕಾಮಗಾರಿ ಆರಂಭಿಸುವ ಮೊದಲು ಯಾವುದೇ ಮುನ್ಸೂಚನೆ ನೀಡಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಲ್ಲ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳೀಯ ನಿವಾಸಿಗಳು ಪ್ರಶ್ನಿಸಿದಾಗ ಗುತ್ತಿಗೆದಾರನಿಂದ ನಮಗೆ ಒಂದು ವರ್ಷದ ವರೆಗೆ ಸಮಯವಿದೆ.

ನಮಗನುಕೂಲವಾದಾಗ ಮಾಡುತ್ತೇವೆ. ನೀವೇನು ಮಾಡುತ್ತಿರಾ ? ಎಂಬ ಉದ್ದಟ ಪ್ರತಿಕ್ರಿಯೆ ಬಂದಿರುವದಾಗಿ ಆರೋಪಿಸಲಾಗಿದೆ. ಈ ಹೇಳಿಕೆ ಸ್ಥಳೀಯರಲ್ಲಿ ಮತ್ತಷ್ಟು ಆಕ್ರೋಷಕ್ಕೆ ಕಾರಣವಾಗಿದೆ. ಸಾರ್ವಜನಿಕ ಕಾಮಗಾರಿಗಳು ಜನರ ತೆರಿಗೆ ಹಣದಿಂದ ನಡೆಯುವಾಗ ಜನರ ಪ್ರಶ್ನೆಗೆ ಹೊಣೆಗಾರಿಕೆಯಿಂದ ಉತ್ತರಿಸಬೇಕಾದವರಿಂದ ಇಂತಹ ವರ್ತನೆ ಅಸಮಧಾನಕ್ಕೆ ಕಾರಣವಾಗಿದೆ ಈ ವಿಷಯವನ್ನು ಸ್ಥಳೀಯ ನಿವಾಸಿಗಳು ಪೌರಾಯುಕ್ತರ ಗಮನಕ್ಕೆ ತಂದಿದ್ದಾರೆ ಮತ್ತು ಅವರು ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ  ಮಾಡಬೇಕು. ನೀರ್ಲಕ್ಷ ತೋರಿದ ಗುತ್ತಿಗೆ ದಾರರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.