ಪೊಲೀಸರೇ ಕ್ಯಾಂಪಸ್ ಗೆ ನುಗ್ಗಿ ನಡೆಸಿರುವ ದಾಂಧಲೆ ಬೇಲಿಯೇ ಎದ್ದು ಹೊಲಮೇದಂತೆ': ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು, ಡಿ.16 ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯುನಿವರ್ಸಿಟಿ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೌರ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.ಕಳೆದ ರಾತ್ರಿ ದೆಹಲಿಯಲ್ಲಿ 'ಬೇಲಿಯೇ ಎದ್ದು ಹೊಲಮೇದಂತೆ'  ಪೊಲೀಸರೇ ಕ್ಯಾಂಪಸ್ ಗೆ ನುಗ್ಗಿ ನಡೆಸಿರುವ ದಾಂಧಲೆ ಮತ್ತು ವಿದ್ಯಾರ್ಥಿಗಳ ಮೇಲೆ‌ ನಡೆದಿರುವ ದೌರ್ಜನ್ಯದ ಬಗ್ಗೆ ಕೇಂದ್ರ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ  ವಿದ್ಯಾರ್ಥಿ ಸಮೂಹ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಸರ್ವಾಧಿಕಾರಿ ಧಿಮಾಕಿನಿಂದ ಹತ್ತಿಕ್ಕಲು ಹೊರಟಿರುವ ನರೇಂದ್ರ ಮೋದಿ ಸರ್ಕಾರದ ನಡೆ ಖಂಡನೀಯ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಿನ್ನೆ ದೆಹಲಿಯಲ್ಲಿ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಡಿನ ದಾಳಿ ನಡೆಸಿರುವ ಹಾಗೂ ಕ್ಯಾಂಪಸ್‌ ಒಳಗೆ ನುಗ್ಗಿ ದಾಂಧಲೆ ಮಾಡಿರುವ ವೀಡಿಯೋ ವೈರಲ್ ಆಗಿದೆ. ಪೊಲೀಸರ ಕ್ರಮಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುಂಡಿನ ದಾಳಿಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.