ವಿಜಯಪುರ 28: ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಿದ ತೊಗರಿ ಬೀಜ ಕಳಪೆಯಾಗಿದ್ದು, ಇದರಿಂದ ರೈತರಿಗೆ ಅಪಾರ ಹಾನಿಯಾಗಿದೆ. ಕೂಡಲೇ ಇಲಾಖೆಯಿಂದ ಪರಿಹಾರ ಒದಗಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್. ಪಾಟೀಲ ಅವರಿಗೆ ತೊಗರಿ ಪೆಂಡಿಯನ್ನು ಪ್ರದರ್ಶಿಸುವ ಮೂಲಕ ಆಗ್ರಹಿಸಿದರು. ಬೆಂಗಳೂರಿನ ಕೃಷಿ ಆಯುಕ್ತಾಲಯ ಕಚೇರಿಗೆ ಬುಧವಾರ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷಿ ಇಲಾಖೆ ಮೂಲಕ ವಿತರಿಸಿದ ಜಿಆರ್ ಜಿ 152 ಹಾಗೂ ಜಿಆರ್‌ಜಿ 811 ತೊಗರಿ ಬೀಜ ಕಳೆಯಾಗಿರುವುದು ಕಂಡು ಬಂದಿದೆ. ಈ ಬೀಜ ಬಿತ್ತಿದ ಬೆಳೆಯಲ್ಲಿ ಕಾಯಿಯೇ ಇಲ್ಲ. ಹೀಗಾಗಿ ರೈತರು ಹಾನಿ ಅನುಭವಿಸುವಂತಾಗಿದೆ. ಈ ಬಗ್ಗೆ ಪರೀಶೀಲನೆ ನಡೆಸಬೇಕು. ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತೊಗರಿ ಬೀಜದ ಬಗ್ಗೆ ಅಧಿಕಾರಿಗಳನ್ನು ಯಾವುದೇ ಮಾಹಿತಿ ನೀಡಿಲ್ಲ. ಬಿತ್ತನೆ ಮಾಡಬೇಕಾದರೆ ಎಷ್ಟೆಷ್ಟು ಅಂತರದಲ್ಲಿ ಬಿತ್ತನೆ ಮಾಡಬೇಕೆಂಬುದು ಮೊದಲೇ ಬೀಜದ ಕಂಪೆನಿಯವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಡಬೇಕು. ಬಿತ್ತನೆ ಮಾಡಿದ ನಂತರ ಎಷ್ಟು ಪ್ರಮಾಣ ನೀರು ಹಾಯಿಸಬೇಕು ಮತ್ತು ಯಾವ ಅವಧಿಯವರೆಗೆ ತೊಗರಿ ಬೆಳೆಗೆ ನೀರು ಉಣಿಸಬೇಕೆಂಬುದು ಮೊದಲೇ ರೈತರಿಗೆ ಮಾಹಿತಿ ನೀಡಬೇಕು. ಆದರೆ, ರೈತರಿಗೆ ಮಾಹಿತಿಯೇ ನೀಡಿಲ್ಲ. ಕಂಪೆನಿಯವರು ನೀಡಿದ ಬೀಜದ ಬಗ್ಗೆ ಯಾವುದೇ ತೊಂದರೆ ಇರುವುದಿಲ್ಲ ಹಾಗೂ ಇದು ಒಣಬೇಸಾಯದಲ್ಲಿ ಹೆಚ್ಚಿನ ಇಳುವರಿ ಬರುತ್ತದೆ ಎಂದು ನಂಬಿಸಿದ್ದಾರೆ ಎಂದರು.
ನೆಟಿ ರೋಗ ಬರುವುದಿಲ್ಲವೆಂದು ರೈತರಿಗೆ ನಂಬಿಸಿ ಬೀಜ ವಿತರಣೆ ಮಾಡಿದ್ದಾರೆ. ಬೀಜ ವಿತರಣೆ ಮಾಡಿ ತೊಗರಿ ಬೆಳೆ ಹಾಳಾದ ನಂತರ ನೀವೇ ತಪ್ಪು ಮಾಡಿದ್ದೀರಿ, ಸರಿಯಾಗಿ ಬಿತ್ತನೆ ಮಾಡಿದ ಸಾಲುಗಳಲ್ಲಿ ಅಂತರವಿಲ್ಲ. ನೀವು ಸರಿಯಾಗಿ ನೀರು ಒದಗಿಸಿಲ್ಲ ಎಂಬತ್ಯಾದಿ ತಪ್ಪುಗಳನ್ನು ರೈತರ ಮೇಲೆ ಹಾಕಿ ಆಪಾದನೆ ಕೊಡಲಾಗುತ್ತಿದೆ. ಇದನ್ನೆ ಬೀಜ ಖರೀದಿ ಮಾಡುವ ವೇಳೆ ರೈತರಿಗೆ ಸರಿಯಾಗಿ ಮಾಹಿತಿ ಕೊಡುವುದಿಲ್ಲ ಏಕೆ? ಬೀಜ ಮಾರುವ ಮೊದಲು ತಪ್ಪು ಮಾಹಿತಿ ನೀಡಿ ಎಲ್ಲ ಹಾಳಾದ ನಂತರ ಹೀಗೆ ಮಾಡಬೇಕಿತ್ತು. ಹಾಗೇ ಮಾಡಬೇಕಿತ್ತು ಎಂದು ರೈತರ ಮೇಲೆಯೇ ಗೂಬೆ ಕೂರಿಸುವುದು ಯಾವ ನ್ಯಾಯ? ಎಂದರು.
ಒಟ್ಟಾರೆ ತೊಗರಿ ಬೀಜವೇ ಮೊದಲು ಕಳಪೆಯಾಗಿದ್ದು ಈ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಬೇಕು. ರೈತರಿಗೆ ಪರಿಹಾರ ಕಳಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಲಕೇಶ ತಳವಾರ ಉಪಸ್ಥಿತರಿದ್ದರು.