ಸಂಕೇಶ್ವರ : ಸಂಕೇಶ್ವರದ ಸಿಪಿಐ ಶಿವಶರಣ ಅವಜಿ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಅವಜಿ ಅವರನ್ನು ಅಮಾನತು ಮಾಡಬೇಕು ಇಲ್ಲ ವರ್ಗಾವಣೆ ಮಾಡುವಂತೆ ನೂರಾರು ದಲಿತರು ಮಂಗಳವಾರ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಿಗ್ಗೆ ಪುರಸಭೆಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಜಮಾವಣೆಗೊಂಡ ನೂರಾರು ದಲಿತ ಮುಖಂಡರು ಹಾಗೂ ಯುವಕರು ಬಳಿಕ ಪುರಸಭೆಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತದಲ್ಲಿ ಆಗಮಿಸಿ ಪೊಲೀಸ್ ಠಾಣೆ ಎದರುರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಅಲ್ಲದೆ ಸಿಪಿಐ ಅವಜಿ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು.
ಅಲ್ಲದೆ ಅವಜಿ ಹಟಾವೊ ಸಂಕೇಶ್ವರ ಬಚಾವೊ ಘೋಷಣೆ ಕೂಗಿದರು. ಬೆಳಗಾವಿ ಎಸ್ ಪಿ ಅವರು ಸ್ಥಳಕ್ಕೆ ಆಗಮಿಸುವ ವರೆಗೆ ತಾವು ಪ್ರತಿಭಟನೆ ಕೈಬಿಡುವದಿಲ್ಲ ಎಂದು ಪಟ್ಟು ಹಿಡಿದರು. ಸುಮಾರು ಗಂಟೆಗಳ ಕಾಲ ಪೊಲೀಸ್ ಠಾಣೆ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಕೆಲ ದಲಿತ ಮುಖಂಡರು ಮಾತನಾಡಿ ಶಿವಶರಣ ಅವಜಿ ಅವರು ದಲಿತ ವಿರೋಧಿ ನೀತಿ ಅನುಸರಿಸುವ ಮೂಲಕ ದಲಿತರನ್ನು ಹೀನಾಯವಾಗಿ ಕಾಣುತ್ತಿದ್ದಾರೆ. ಅಲ್ಲದೆ ದಲಿತರು ತಂಟೆ ತಕರಾರು ಬಂದಲ್ಲಿ ಲಂಚದ ಬೇಡಿ ಇಡುತ್ತಾರೆ ಎಂದು ದೂರಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಎಸ್ ಪಿ ಬಸರಗಿ ಅವರ ಮೂಲಕ ಐಜಿ ಹಾಗೂ ಎಸ್ ಪಿ ಅವರಿಗೆ ಮನವಿಯೊಂದನ್ನು ರವಾನಿಸಿ ಸಿಪಿಐ ಅವಜಿ ಅವರನ್ನು ಅಮಾನತು ಮಾಡಬೇಕು, ಇಲ್ಲ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ತಾವು ಈ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳಿಸುವದಾಗಿ ಹೆಚ್ಚುವರಿ ಎಸ್ ಪಿ ಆರ್.ಬಿ ಬಸರಗಿ ಅವರು ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆ ಪಡೆಯಲಾಯಿತು. ಈ ವೇಳೆ ಯಮಕನಮರಡಿ ಸಿಪಿಐ ಜಾವೀದ್ ಮುಶಾಪೂರೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿತ್ತು.
ಪ್ರತಿಭಟನೆಗೆ ನ್ಯಾಯವಾದಿಗಳಿಂದ ಬೆಂಬಲ :
ಸಿಪಿಐ ಶಿವಶರಣ ಅವಜಿ ಅವರ ದಲಿತ ವಿರೋಧಿ ನೀತಿ ಖಂಡಿಸಿ ದಲಿತರು ರಸ್ತೆ ತಡೆದು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಸಂಕೇಶ್ವರದ ಕೆಲವು ನ್ಯಾಯವಾದಿಗಳು ಕೂಡ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.