ಡಿಜಿಪಿ ಔರಾದ್ಕರ್ ಟ್ವಿಟ್ಟರ್ ಹ್ಯಾಕ್: ದುಷ್ಕರ್ಮಿಗಳಿಗಾಗಿ ಮುಂದುವರಿದ ಶೋಧ

ಬೆಂಗಳೂರು, ಜ.9               ಪೊಲೀಸ್ ಗೃಹಮಂಡಳಿ ಡಿಜಿಪಿ ರಾಘವೇಂದ್ರ ಔರಾದ್ಕರ್ ಅವರ ಟ್ವಿಟ್ಟರ್  ಖಾತೆಯನ್ನು ಹ್ಯಾಕ್ ಮಾಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಬರೆದು ಟ್ವೀಟ್  ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. 

ರಾಘವೇಂದ್ರ  ಔರಾದ್ಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೂ ಅದನ್ನು  ಹ್ಯಾಕ್ ಮಾಡಿ ಟ್ವೀಟ್ ಮಾಡಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ  ಅಲ್ಲದೇ ಟ್ವಿಟರ್ ಇಂಡಿಯಾಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಘವೇಂದ್ರ ಔರಾದ್ಕರ್ ಅವರ  ಟ್ವಿಟ್ಟರ್ ಖಾತೆಯಿಂದ ದೀಪಿಕಾ ಪಡುಕೋಣೆ ಅವರನ್ನು ಹಿಯಾಳಿಸುವಂತೆ ಪೋಸ್ಟ್  ಮಾಡಲಾಗಿತ್ತು. ರಾಘವೇಂದ್ರ ಔರಾದ್ಕರ್ ಅವರು ಬಹಳ ಹಿಂದೆಯೇ ತಮ್ಮ ಟ್ವಿಟ್ಟರ್ ಖಾತೆಯನ್ನು  ಸ್ಥಗಿತಗೊಳಿಸಿದ್ದು ಅದನ್ನು ಹ್ಯಾಕ್ ಮಾಡಿ ಟ್ವೀಟ್ ಮಾಡಲಾಗಿತ್ತು. 

ರಾಘವೇಂದ್ರ  ಔರಾದ್ಕರ್ ಅವರ ಖಾತೆಯನ್ನು ಹ್ಯಾಕ್ ಮಾಡಿ ಹಾಕಿದ ಟ್ವೀಟ್ನಲ್ಲಿ ದೀಪಿಕಾ ಪಡುಕೋಣೆ  ಬಿಎಸ್ಎನ್ಎಲ್ಗೆ ಬೆಂಬಲ ನೀಡಿದರು ಅದು ನಷ್ಟಕ್ಕೆ ಹೋಯಿತು, ಆರ್ಸಿಬಿ ಜೊತೆ ನಿಂತರು  ಅದು ಒಂದು ಬಾರಿಯೂ ಕಪ್ ಗೆಲ್ಲಲಿಲ್ಲ, ವಿಜಯ್ ಮಲ್ಯ ಮತ್ತು ಸಿದ್ಧಾರ್ಥ ಮಲ್ಯ  ದೇಶ ಬಿಟ್ಟೇ ಪರಾರಿ ಆದರು. ಯುವರಾಜ್ ಸಿಂಗ್ ಜೊತೆ ಹೋದರು ಬಹು ಕಷ್ಟಪಟ್ಟು ಕ್ಯಾನ್ಸರ್  ಜೊತೆ ಹೋರಾಡಿ ಬದುಕಿದರು. ಈಗ ತುಕ್ಡೆ-ತುಕ್ಡೆ ಗ್ಯಾಂಗ್ ಸರದಿ, ದೀಪಿಕಾ ಅವರ ಟ್ರ್ಯಕ್  ರೆಕಾರ್ಡ್ ಅದ್ಭುತವಾಗಿದೆ, ಆಲ್ ದಿ ಬೆಸ್ಟ್ ಹೇಳೋಣ' ಎಂದು ಟ್ವಿಟ್ ಮಾಡಲಾಗಿತ್ತು.