ವಿಜಯಪುರ, ಡಿಸೆಂಬರ್ 20: ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮೆಗಾ ಮಾರುಕಟ್ಟೆ ಕಾಮಗಾರಿ ಪ್ರಾರಂಭಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರವಾರ ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನ ಯೋಜನೆಯಡಿಯಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆಂದು ಕಾಯ್ದಿರಿಸಿದ ಜಾಗೆಯನ್ನು ಸ್ಥಾನಿಕವಾಗಿ ಪರೀಶೀಲನೆ ನಡೆಸಬೇಕು. ಕಾಯ್ದಿರಿಸಿದ ಜಾಗ ಅತಿಕ್ರಮಣವಾಗಿದ್ದಲ್ಲಿ ತೆರವುಗೊಳಿಸಲು ಕ್ರಮ ಕೈಗೊಂಡು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಹಾಗೂ ನಿಡಗುಂದಿ ತಹಶೀಲ್ದಾರರಿಗೆ ಅವರು ಸೂಚನೆ ನೀಡಿದರು.
ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಆರ್.ಎಸ್. ನಲ್ಲಿರುವ ಜವಾಹರ ನವೋದಲಯ ವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಪಿ.ಎಂ.ಸಿ. ಸಭೆ ನಡೆಸಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ನಿಡಗುಂದಿ ಪಟ್ಟಣದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪರೀಶೀಲಿಸಿದ ಅವರು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.