ಪರಿಸರ ಸಂರಕ್ಷಣೆ ಜಾಗೃತಿಗಾಗಿ ಸೈಕಲ್ ಯಾತ್ರೆ

ಬೆಂಗಳೂರು, ಡಿ.19 ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ, ಕೋಮು ಸೌಹಾರ್ದತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ "ಪರ್ಯಾವರಣ್ ಜಾಗೃತ್ ಅಭಿಯಾನ್" ಹೆಸರಿನಲ್ಲಿ ಸೈಕಲ್ ಯಾತ್ರೆ ಹಮ್ಮಿಕೊಂಡಿರುವುದಾಗಿ ಎವಿಕೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಿರ್ದೇಶಕ ಡಾ.ಸಾನಂದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಸಮಾಜದ ಕಾಳಜಿ ಕುಗ್ಗುತ್ತಿದ್ದು, ಅವರಲ್ಲಿ ಪರಿಸರ ಸ್ವಚ್ಛತೆ, ಅರಣ್ಯ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಅರಿವು ಮೂಡಿಸಲು  12 ಜನರೊಂದಿಗೆ ಈ ಸೈಕಲ್‌ ಯಾತ್ರೆ ನಡೆಸಲಾಗುತ್ತಿದೆ ಎಂದು‌ ಅವರು ಹೇಳಿದರು.ಸೈಕಲ್ ಯಾತ್ರೆಯನ್ನು ಕಳೆದ ಅಕ್ಟೋಬರ್ 2 ರಂದು  ಜಮ್ಮುವಿನ ಗಾಂಧಿ ಚೌಕದಲ್ಲಿ ಪ್ರಾರಂಭಿಸಿದ್ದು, ಜ.30ಕ್ಕೆ ಕನ್ಯಾಕುಮಾರಿಯ ಗಾಂಧಿ ಮೆಮೊರಿಯಲ್ ಭವನದಲ್ಲಿ ಕೊನೆಗೊಳ್ಳಲಿದೆ ಎಂದರು. ಈಗಾಗಲೇ ದೇಶದ ಅನೇಕ ರಾಜ್ಯಗಳನ್ನು ಸುತ್ತಾಡಿ ಅಲ್ಲಿನ ಪ್ರಮುಖ ಶಾಲಾ, ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಪನ್ಯಾಸಗಳು ಹಾಗೂ ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎವಿಕೆ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ.ರಾಜೀವ್ ರೈ, ಕೆವಿ ನಾಗರಾಜು ಮೂರ್ತಿ‌ ಉಪಸ್ಥಿತರಿದ್ದರು.