ರಾಮದುರ್ಗ 02: ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಗ್ರಾಮೀಣ ಮಕ್ಕಳಿಗಾಗುವ ತೊಂದರೆಯನ್ನು ಅರಿತುಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸೈಕಲ್ ನೀಡುವದರ ಜೊತೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧ್ಯಾನತೆ ನೀಡಿದ್ದಾರೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ವಿದ್ಯಾಚೇತನ ಶಾಲಾ ಆವರಣದ ಶಾಸಕರ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ತಾಲೂಕಾ ಮಟ್ಟದ ಸೈಕಲ್ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ಯುವ ಜನತೆ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಅಪಘಾತಗಳು ನಡೆಯುತ್ತಿರುವ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ರಸ್ತೆ ಸಂಚಾರಿ ನಿಯಮಗಳ ಕುರಿತು ಮಕ್ಕಳು ಜ್ಞಾನ ಪಡೆದುಕೊಂಡು ಸೈಕಲ್ ಸಂಚಾರ ಕೈಗೊಳ್ಳಬೇಕೆಂದು ಸಲಹೆ ನೀಡಿದ ಅವರು, ಶಿಕ್ಷಣ ಕ್ಷೇತ್ರದ ಪ್ರಗತಿಯಾಗಿ ತಾವು ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು.
ಇಂದು ತ್ವರಿತ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನದ ಭರಾಟೆಯೊಂದಿಗೆ ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಮಾರ್ಪಾಡಾಗಲು ಶಿಕ್ಷಣದ ಅವಶ್ಯಕತೆ ಅಲ್ಲಗಳೆಯುವಂತಿಲ್ಲ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಜಿ.ಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ಶಿವಕ್ಕ ಬೆಳವಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅಲಾಸೆ, ಪುರಸಭೆ ಸದಸ್ಯರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿವರ್ಗ ಸೇರಿದಂತೆ ಇತರರಿದ್ದರು. ಮುಖ್ಯೋಪಾಧ್ಯಾಯ ವೈ.ವ್ಹಿ. ಮಳಲಿ ಸ್ವಾಗತಿಸಿ, ವಂದಿಸಿದರು.