ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ ಸೈಕಲ್ ಜಾಥಾ

ಬೆಂಗಳೂರು, ಜೂನ್‌ 29: ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಿಂದ ಆದಾಯ ತೆರಿಗೆ ಕಟ್ಟಡದವರೆಗೆ "ಸೈಕಲ್ ಪ್ರತಿಭಟನಾ ರಾಲಿ" ನಡೆಸಿದ್ದು, ಸುಮಾರು 46 ವರ್ಷಗಳ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಸೈಕಲ್ ಏರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ  ತಮ್ಮ ನಿವಾಸದಿಂದಲೇ ಕಾರ್ಯಕರ್ತರೊಡನೆ ಕೆಪಿಸಿಸಿ ಕಚೇರಿಗೆ ಸೈಕಲ್ ಏರಿ ಬಂದ ರಾಜ್ಯ ಕಾಂಗ್ರೆಸ್ ನಾಯಕರು, ಕೆಪಿಸಿಸಿ ಕಚೇರಿಯಿಂದ ಆದಾಯ ತೆರಿಗೆ ಕಟ್ಟಡ, ಸರ್ಕಾರಿ ಅಂಚೆ ಕಚೇರಿಯವರೆಗೆ ರಾಲಿ ನಡೆಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ ಸೇರಿ ಅನೇಕ ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ತಾವು 1974 ನೇ ಇಸವಿಯಿಂದ ಸೈಕಲ್ ಹೊಡೆದಿರಲಿಲ್ಲ. ಈಗಲೇ ಸೈಕಲ್ ಹೊಡೆಯುತ್ತಿದ್ದೇನೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಗುತ್ತಿದೆ. ಬ್ಯಾರಲ್ ಗೆ 130 ರೂ ಡಾಲರ್ ಇದ್ದರೂ ಸಹ ನಮ್ಮ ದೇಶದಲ್ಲಿ ತೈಲ ಬೆಲೆ ದರ ಏರಿಕೆ ಮಾಡಲಾಗಿದೆ. ತಮ್ಮ ಪ್ರಕಾರ ಪೆಟ್ರೋಲ್ ಗೆ 25 ರೂ ಮಾಡಬೇಕಾಗಿತ್ತು. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತೈಲಕ್ಕೆ ಸಬ್ಸಿಡಿ ನೀಡಿತ್ತು. ಆನಂತರದ ಮೋದಿ ಸರ್ಕಾರ ಯಾವುದನ್ನೂ ಕೊಟ್ಟಿಲ್ಲ. ಸಹಾಯಧನವನ್ನು ನಿಲ್ಲಿಸಿದೆ. ಸಾಮಾನ್ಯ ಜನರ ಮೇಲೆ ದುಬಾರಿ ಬೆಲೆ ವಿಧಿಸಿ ಅವರ ಬದುಕಿನ ಮೇಲೆ ಬರೆ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸೋಂಕಿನ ದುಃಸ್ಥಿತಿಯಲ್ಲಿಯೂ ಕೇಂದ್ರ  ಸರ್ಕಾರ ಕಳೆದ 10 ದಿನಗಳಿಂದ ತೈಲ ಬೆಲೆ 11 ರೂ ಹೆಚ್ಚಿಸಿದೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ , ಕೇಂದ್ರ ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಕೊರೋನ ನಿರ್ವಹಣೆಯಲ್ಲಿ ಸರ್ಕಾರ ವೈಫಲ್ಯತೆ ಖಂಡಿಸಿ ಸಹ ಪ್ರತಿಭಟನೆ ನಡೆಸಲಾಗುವುದೆಂದು ಸಿದ್ದರಾಮಯ್ಯ ಎಚ್ಚರಿಸಿದರು.

ಬೆಲೆ ಏರಿಕೆ ವಿರುದ್ಧ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಸಾಂಕೇತಿಕ ಪ್ರತಿಭಟನೆ ಮಾತ್ರ. ಕಾಂಗ್ರೆಸ್್ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿತ್ತು. ಆಗ ತೈಲ ಬೆಲೆ ಸ್ಪಲ್ಪ ಏರಿಕೆಯಾದರೂ ಬಿಜೆಪಿಯವರು ನಿರಂತರ ಪ್ರತಿಭಟನೆ ಮಾಡುತ್ತಿದ್ದರು. ಮನಮೋಹನ್ ಸಿಂಗ್ ಕಾಲದಲ್ಲಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಿದ್ದರು. ಆದರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಪೆಟ್ರೋಲ್- ಡಿಸೇಲ್ ದರ ಹೆಚ್ಚು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೊರೊನಾ ದಿಂದ ಜನರಿಗೆ ಕೆಲಸ ಇಲ್ಲ. ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬೆಲೆ ಏರಿಕೆ ಮಾಡುವ ಅವಶ್ಯಕತೆ ಇತ್ತಾ?. ಮಾನವೀಯತೆಯಿಲ್ಲದ ಮೋದಿಯದ್ದು ರಾಕ್ಷಸಿ ಪ್ರವೃತ್ತಿ ಎಂದು ಕಿಡಿಕಾರಿದರು.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪೆಟ್ರೋಲ್ ದರವನ್ನು 82 ರೂಪಾಯಿ ಪ್ರತಿ ಲೀಟರ್ ಗೆ ಏರಿಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ಸಹ ಪ್ರಧಾನಿಗೆ ಈ ಬಗ್ಗೆ ಪತ್ರ ಬರೆದು ಬೆಲೆ ಇಳಿಸುವಂತೆ ಒತ್ತಯ ಮಾಡಿದ್ದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಆರು ವರ್ಷಗಳಲ್ಲಿ 18 ಲಕ್ಷ ಕೋಟಿ ಬೊಕ್ಕಸಕ್ಕೆ ಕಚ್ವಾತೈಲದಿಂದ ತೆರಿಗೆ ರೂಪದಲ್ಲಿ ಬಂದಿದೆ. ಯುಪಿಎ ಸರ್ಕಾರ ಇದ್ದಾಗ ಸಬ್ಸಿಡಿ ಕೊಟ್ಟಿದ್ದೇವೆ. ಬಡವರಿಗೆ, ಕೂಲಿ ಕಾರ್ಮಿಕರ ಕೈಗೆ ಹಣ ಕೊಡಿ ಆಗ ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಶಕ್ತಿ ಬರುತ್ತದೆ. ಇದರಿಂದ ನಮಗೆ ಆರ್ಥಿಕ ಪರಿಸ್ಥಿತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಮೋದಿ ಬಡವರ ಜೇಬಿಗೆ ದುಡ್ಡು ಹಾಕುವುದು ಬಿಟ್ಟು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಶ್ರೀಮಂತ ಉದ್ಯಮಿಗಳ ಜೇಬು ತುಂಬಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಮೋದಿ ಮತ್ತು ಅಮಿತ್ ಶಾ ಕಾರಣ. ಮೋದಿಗೆ ಅರ್ಥಿಕ ಸಲಹೆ ಕೊಡುತ್ತಿದ್ದವರೇ ಇಂದು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.