ಬೆಂಗಳೂರು, ಜ : ಪರಿಸರ ಸಂರಕ್ಷಣೆ ಉದ್ದೇಶದಿಂದ ನಗರದಲ್ಲಿಂದು ಸೈಕಲ್ ಜಾಥ ಆಯೋಜಿಸಲಾಗಿತ್ತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಮತ್ತು ಗೇಲ್ ಇಂಡಿಯಾದ ದಕ್ಷಿಣ ವಿಭಾಗದ ಕಾರ್ಯಕಾರಿ ನಿರ್ದೇಶಕ ಪಿ.ಮುರುಗೇಶನ್ ಅವರು ಕಂಠೀರವ ಕ್ರೀಡಾಂಗಣದಲ್ಲಿ ಸಕ್ಷಮ್ ಸೈಕ್ಲಾಥಾನ್ಗೆ ಹಸಿರು ನಿಶಾನೆ ತೋರಿದರು.
ಈ ಸೈಕ್ಲಥಾನ್ನಲ್ಲಿ 3000 ಕ್ಕೂ ಅಧಿಕ ಸೈಕ್ಲಿಸ್ಟ್ಗಳು ಪಾಲ್ಗೊಂಡಿದ್ದು, 5 ಕಿಲೋಮೀಟರ್ವರೆಗೆ ಸೈಕಲ್ ಸವಾರಿ ಮಾಡಿದರು. ಕಬ್ಬನ್ಪಾರ್ಕ್ ಮತ್ತಿತರೆ ಸ್ಥಳಗಳ ಮೂಲಕ ಮತ್ತೆ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ಸೈಕ್ಲಿಸ್ಟ್ಗಳ ಪೈಕಿ 10 ಮಂದಿ ಸ್ಪರ್ಥಿಗಳಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಯಿತು.
ಕೇಂದ್ರ ಪೆಟ್ರೋಲಿಯಂ ಪೆಟ್ರೋಲಿಯಂ ಕನ್ಸರ್ವೆಶನ್ ರೀಸರ್ಚ್ ಅಸೋಸಿಯೇಷನ್(ಪಿಸಿಆರ್ಎ) ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಸಹಯೋಗದಲ್ಲಿ ಪರಿಸರ ಸಂರಕ್ಷಣೆಯ ಈ ಜಾಗೃತಿ ಅಭಿಯಾನವಾದ ಸಕ್ಷಮ್ 2020 ಅನ್ನು ಗೇಲ್ ಇಂಡಿಯಾ ಆಯೋಜಿಸಿತ್ತು.
ಜನರಲ್ಲಿ ಇಂಧನ ಉಳಿತಾಯದ ಮೂಲಕ ಪರಿಸರ ಸಂರಕ್ಷಣೆ ಮತ್ತು ಸೈಕಲ್ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸೈಕ್ಲಥಾನ್ ಆಯೋಜಿಸಲಾಗಿತ್ತು. ಈ ಸೈಕಲ್ ಬಳಕೆಯಿಂದ ಇಂಧನ ಉಳಿತಾಯದ ಜತೆಗೆ ಶುದ್ಧ, ಹಸಿರು ಮತ್ತು ಆರೋಗ್ಯಕಾರಿ ಪರಿಸರ ನಿರ್ಮಾಣವಾಗಲಿದೆ ಎಂಬುದನ್ನು ಜನರಿಗೆ ತಿಳಿ ಹೇಳುವುದು ಇದರ ಉದ್ದೇಶವಾಗಿತ್ತು.
ಗೇಲ್ ಇಂಡಿಯಾದ ದಕ್ಷಿಣ ವಿಭಾಗದ ಕಾರ್ಯಕಾರಿ ನಿರ್ದೇಶಕ ಪಿ.ಮುರುಗೇಶನ್ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಒಂದು ಸಣ್ಣ ಉಪಕ್ರಮವೂ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಸೈಕಲ್ನಲ್ಲಿ ಸಂಚರಿಸುವುದು ಅಥವಾ ವಾಕಿಂಗ್, ಸಾರ್ವಜನಿಕ ಸಾರಿಗೆ ಬಳಕೆ, ಕಾರ್-ಪೂಲಿಂಗ್, ಇಂಧನ ಕ್ಷಮತೆಯ ಉತ್ಪನ್ನಗಳು, ಯಂತ್ರೋಪಕರಣಗಳ ಬಳಕೆಯಂತಹ ಕ್ರಮಗಳನ್ನು ಕೈಗೊಂಡರೆ ಅವರಿಂದ ಸ್ವಲ್ಪ ಮಟ್ಟಿಗಾದರೂ ಪರಿಸರ ಶುದ್ಧವಾಗಲು ಕಾರಣವಾಗುತ್ತದೆ ಎಂದರು.