ಸಂಸ್ಕೃತಿ ಮತ್ತು ಪ್ರಕೃತಿ ರಕ್ಷಣೆ ಎಲ್ಲ ಸಾಧೂ ಸಂತರ ಉದ್ದೇಶವಾಗಬೇಕು: ಬ್ರಹ್ಮಾನಂದ ಸ್ವಾಮಿಜೀ

ಲೋಕದರ್ಶನ ವರದಿ

ಕಾಗವಾಡ 11: ಸಂಸ್ಕೃತಿ ಮತ್ತು ಪ್ರಕೃತಿ ಮನುಷ್ಯನಎರಡು ಕಣ್ಣುಗಳಿದ್ದಂತೆ.ಇವುಗಳ ವಿನಾಶದಿಂದ ಮನುಷ್ಯನು ನೆರೆ, ಹೊರೆ, ಬರ ಇಂತಹ ಅನೇಕ ವಿಪತ್ತುಗಳನ್ನು ಎದುರಿಸುತ್ತಿದ್ದಾನೆ. ಪ್ರಕೃತಿ ವಿನಾಶ ಭೌತಿಕ ಪ್ರಳಯವಾದರೇ, ಸಂಸ್ಕೃತಿ ವಿನಾಶ ಅಂತರಿಕ ಪ್ರಳಯವಾಗಿದೆ. ಇವುಗಳ ವಿನಾಶದಿಂದ ಮನುಷ್ಯ ಮೃಗದಂತೆ ಮಾನವ ಜಾತಿಯ ಅಂತ್ಯಕ್ಕೆ ಕಾರಣವಾಗುತ್ತಿದ್ದಾನೆ. ಎಲ್ಲ ಸಾಧು-ಸಂತರು ಯುವಜನರಲ್ಲಿ ಸಂಸ್ಕೃತಿ ಮತ್ತು ಪ್ರಕೃತಿಯ ಅರಿವು ಮೂಡಿಸಿ ಸದೃಢ ಸಮಾಜವನ್ನು ಕಟ್ಟಬೇಕು ಎಂದು ಪರಮಾನಂದವಾಡಿಯ ಗುರುದೇವ ಆಶ್ರಮದಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಹೇಳಿದರು.

ಜುಗೂಳ ಗ್ರಾಮದಲ್ಲಿ ಸಲ್ಲೇಖನ ನಿರತರಾಷ್ಟ್ರಸಂತ ಮುನಿಶ್ರೀ ಚಿನ್ಮಯಸಾಗರ ಮಹಾರಾಜರನ್ನು ಬುಧುವಾರ ಭೇಟ್ಟಿ ಮಾಡಿ ಅವರೊಂದಿಗೆ ಕೆಲಹೊತ್ತು ಧಾರ್ಮಿಕ ಚರ್ಚೆ ನಡೆಸಿದರು.ದೈವಿಕತೆಯನ್ನು ಉಳಿಸಬೇಕಾಗಿರುವುದು ಸಾಧು ಸಂತರ ಕೆಲಸ. ಎಷ್ಟೋ ಜನ ಸಾಧು ಸಂತರಅದನ್ನು ಮರೆತು, ಸ್ವಾರ್ಥ ಸ್ವಪ್ರತಿಷ್ಟೆ ಹೆಚ್ಚಾಗಿ, ಧರ್ಮ ಧರ್ಮಗಳಲ್ಲಿ ಭಿನ್ನತೆ ಮೂಡಿಸಿ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದರು. ಇದಕ್ಕೆ ಮುನಿಶ್ರೀಗಳು ಇವತ್ತಿನ ಯುವಕರಲ್ಲಿ ಧಾರ್ಮಿಕ ಭಾವನೆಗಳ ಕೊರತೆ ಎದ್ದು ಕಾಣುತ್ತಿದೆ. ಸಾಧು-ಸಂತರು ಸಮಾಜದಲ್ಲಿ ಭಿನ್ನತೆ ಕಾಣದೇ ಸಮಾಜದ ಭವಿಷ್ಯವನ್ನು ಕಾಣುವಂತಾಗಬೇಕೇ ವಿನಹಃ ಭಿನ್ನತೆ ಮೂಡುವಂತಾಗಬಾರದು ಎಂದು ತಿಳಿಸಿದರು.

ಜೈನಧರ್ಮದಲ್ಲಿ ಅಹಿಂಸೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜೈನಧರ್ಮದ ಮುಖ್ಯ ಬೋಧನೆಯೇ ಅಹಿಂಸಾ ಪರಮೋಧರ್ಮವಾಗಿದೆ. ಎಲ್ಲ ಧರ್ಮಗಳಲ್ಲಿಯೂ ಅಹಿಂಸೆ ಪ್ರಾಮುಖ್ಯತೆಯನ್ನು ನೀಡಿದರೂ ಸಹ ಅದರ ಆಚರಣೆ ಮತ್ತು ಅನುಷ್ಟಾನವನ್ನು ಜೈನ ಮುನಿಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂತರಲ್ಲಿ ಮುನಿಶ್ರೀ ಚಿನ್ಮಯ ಸಾಗರಜೀ ಮಹಾರಾಜರು ಅಗ್ರಗಣ್ಯರು.ಅವರ ಅನುಷ್ಟಾನ ವಿಶ್ವದ ಎಲ್ಲ ಧರ್ಮದವರಿಗೆ ಮಾದರಿಯಂತಿದೆ. ಸಾಕಷ್ಟು ಜನತಪಸ್ಸು ಮಾಡುತ್ತಾರೆ. ಸ್ವಾರ್ಥ ಸುಖ ಭೋಗದ ಅಪೇಕ್ಷೆಯೊಂದಿಗೆ ಮಂತ್ರವನ್ನೋ, ಜಪವನ್ನೋ, ಅನುಷ್ಟಾನ ಮಾಡುವವರು ಇದ್ದಾರೆ. ಆದರೆ  ವಿಶ್ವಶಾಂತಿಗಾಗಿ, ಸದೃಢಯುವ ಪಡೆಯ ನಿರ್ಮಾಣಕ್ಕಾಗಿ ಕಠೋರ ತಪಸ್ಸು ಮಾಡಿದ ಮುನಿಶ್ರೀಗಳು ಜುಗೂಳ ಗ್ರಾಮದವರಾಗಿದ್ದು,  ಗ್ರಾಮದ ಕೀರ್ತಿ, ಶ್ರೇಷ್ಟತೆಯನ್ನು ವಿಶ್ವವ್ಯಾಪಕಗೊಳಿಸದ್ದಾರೆ. ಇಂದಿನ ಯುವ ಸಾಧಕರು ಅಖಂಡ ಮನೋಭಾವನೆಯೊಂದಿಗೆ ಸಮಾಜ ಕಟ್ಟುವ ಪ್ರಯತ್ನ ಮಾಡಬೇಕೇ ವಿನಂತ ಸ್ವಂತಿಕೆಯನ್ನು ಅಭಿವೃದ್ಧಿ ಪಡಿಸುವಗೋಸ್ಕರ ಬದುಕು ಬಾರದು ಎಂದರು.

ಸುಮಾರು ಹೊತ್ತು ನಡೆದ ಧಾರ್ಮಿಕ ಚರ್ಚೆಯಲ್ಲಿ ಅನೇಕ ವಿಚಾರ ವಿನಿಯಮಗೊಂಡವು. ಸಾಧು ಸಂತರು ಕಟ್ಟಡ, ಸಂಘ ಸಂಸ್ಥೆಗಳನ್ನು ಕಟ್ಟುವ ಬದಲಾಗಿ ಸಮಾಜದಲ್ಲಿ ಧಾರ್ಮಿಕ ಆಚಾರ, ವಿಚಾರ, ಸಂಸ್ಕೃತಿಯನ್ನು ರಕ್ಷಣೆಗೆ ಮುಂದಾದರೇ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. 

ವರ್ತಮಾನದಲ್ಲಿ ಅತ್ಯಂತ ಶ್ರೇಷ್ಟ ಹಾಗೂ ಕಠೋರ ತಪಸ್ಸಿಯ ದರ್ಶನ ಪಡೆದಿರುವುದು ನಮ್ಮ ಪೂಣ್ಯ ಎಂದು ಮಹಾಸ್ವಾಮಿಗಳು ಹೇಳಿದರು. ಉದ್ಯಮಿ ಪ್ರಕಾಶ ಮೋದಿ, ಸೌ. ಸುಮನಲತಾ ಮೋದಿ, ಅಥಣಿ ಎ.ಪಿ.ಎಂ.ಸಿ.ಅಧ್ಯಕ್ಷ ಅನೀಲ ಕಡೋಲೆ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.