ನವದೆಹಲಿ, ನ. 2: ನಾರ್ತ್ ಸೌಂಡ್ ನಲ್ಲಿ ನಡೆದಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಮಹಿಳಾ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡ ವೀರೋಚಿತ ಸೋಲು ಕಂಡಿದೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 7 ವಿಕೆಟ್ ಗೆ 225 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ ವನಿತೆಯರು 50 ಓವರ್ ಗಳಲ್ಲಿ 224 ರನ್ ಗಳಿಗೆ ಆಲೌಟ್ ಆಯಿತು.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಪರ ನತಾಶಾ ಮೆಕ್ಲೀನ್ 82 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸೇರಿದಂತೆ 51 ರನ್ ಬಾರಿಸಿದರು. ಸ್ಟಫಾನಿ ಟೇಲರ್ ಸೊಗಸಾದ ಬ್ಯಾಟಿಂಗ್ ನಡೆಸಿದರು. 91 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ನೆರವಿನಿಂದ 94 ರನ್ ಸಿಡಿಸಿದರು. ಚೆಡಿಯನ್ ನೇಷನ್ 55 ಎಸೆತಗಳಲ್ಲಿ 43 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಭಾರತದ ಪರ ಶಿಖಾ ಪಾಂಡೆ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಉರುಳಿಸಿದರು.
ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಭಾರತ ತಂಡದ ಆರಂಭಿಕರಾದ ಪ್ರಿಯಾ ಪೂನಿಯಾ ಜೆಮಿಮಾ ರೊಡ್ರಿಗಸ್ ಅವರು ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಪ್ರಿಯಾ 107 ಎಸೆತಗಳಲ್ಲಿ 75 ರನ್ ಬಾರಿಸಿದರೆಮ ರೊಡ್ರಿಗಸ್ 41 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಪೂನಮ್ ರಾವತ್ 22, ಮಿಥಾಲಿ ರಾಜ್ 20, ದೀಪ್ತಿ ಶರ್ಮಾ 19 ರನ್ ಬಾರಿಸಿದರು. ಕೆಳ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಭಾರತ ಸೋಲು ಕಂಡಿತು. ವಿಂಡೀಸ್ ಪರ ಅನಿಸ್ ಮೊಹಮ್ಮದ್ 46 ರನ್ ನೀಡಿ ಐದು ವಿಕೆಟ್ ಕಬಳಿಸಿದರು.