ಲಖನೌ, ನ.5: ಅನುಭವಿ ರಹಮತ್ ಶಾ (47) ಹಾಗೂ ನಜಿಬುಲ್ಲಾ ಜರದಾನ್ (40) ಇವರುಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ್ ನಾಲ್ಕು ವಿಕೆಟ್ ಗಳಿಗೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡದ ಏವಾನ್ ಲೂಯಿಸ್ (24), ನಿಕೋಲಸ್ ಪೋರನ್ (20) ತಂಡಕ್ಕೆ ಕೊಂಚ ಆಸರೆಯಾದರು. 7ನೇ ವಿಕೆಟ್ ಗೆ ರೋಸ್ಟನ್ ಚೇಸ್ ಹಾಗೂ ಜೇಸನ್ ಹೋಲ್ಡರ್ ಜೋಡಿ ತಂಡಕ್ಕೆ 47 ರನ್ ಕಾಣಿಕೆ ನೀಡಿತು. ಹೋಲ್ಡರ್ 31 ಹಾಗೂ ರೋಸ್ಟನ್ ಚೇಸ್ 41 ರನ್ ಸಿಡಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ವೆಸ್ಟ್ ಇಂಡೀಸ್ 38.5 ಓವರ್ ಗಳಲ್ಲಿ 156 ರನ್ ಸೇರಿಸಿತು. ಅಫ್ಘಾನ್ ಪರ ಶರಫುದ್ದೀನ್ ಅಶ್ರಫ್ ಹಾಗೂ ನವೀನ್ ಉಲ್ ಹಕ್ ತಲಾ ಮೂರು ವಿಕೆಟ್ ಪಡೆದರು. ಗುರಿಯನ್ನು ಹಿಂಬಾಲಿಸಿದ ಆಫ್ಘನ್ ತಂಡದ ಆರಂಭ ಕಳಪೆಯಾಗಿತ್ತು. 23 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಹಮತ್ ಶಾ ಹಾಗೂ ನಜೀಬುಲ್ಲಾ ಆಸರೆಯಾದರು. ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ರಹಮತ್ ಶಾ 6 ಬೌಂಡರಿ ನೆರವಿನಿಂದ 47 ರನ್ ಬಾರಿಸಿದರೆ, ನಜೀಬುಲ್ಲ 40 ರನ್ ಸಿಡಿಸಿ ಔಟಾದರು. ಅನುಭವಿ ಅಸ್ಗರ್ ಅಫ್ಘನ್ ಅಜೇಯ 33 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಆಫ್ಘಾನಿಸ್ತಾನ್ 34.5 ಓವರ್ ಗಳಲ್ಲಿ 6 ವಿಕೆಟ್ ಗೆ 160 ರನ್ ಸಿಡಿಸಿತು.