ಬೆಂಗಳೂರು, ಜೂ 30: ಕೊರೋನಾ ಚಿಕಿತ್ಸೆ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.ಸರ್ವಪಕ್ಷಗಳ ಪರಿಶೀಲನಾ ಸಮಿತಿಯಲ್ಲಿ ವಿವಿಧ ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಸೇರಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸೋಂಕಿತರಿಗೆ ತಾನು ಪಡೆಯುತ್ತಿರುವ ಚಿಕಿತ್ಸೆಯ ಸಂಪೂರ್ಣ ವಿವರ ಪಡೆಯುವ ಕಾನೂನುಬದ್ದ ಹಕ್ಕಿದೆ. ಸೋಂಕಿತರಿಗೆ ನೀಡುತ್ತಿರುವ ಔಷಧಿ, ಅನುಸರಿಸುತ್ತಿರುವ ಚಿಕಿತ್ಸಾ ವಿಧಾನವನ್ನು ತಿಳಿಸದೆ ರೋಗಿಗಳನ್ನು ಕತ್ತಲಲ್ಲಿಟ್ಟು ಸರ್ಕಾರ ಅನ್ಯಾಯವೆಸಗುತ್ತಿದೆ. ಕೊರೋನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಿರ್ಲಕ್ಷ್ಯ, ತಾರತಮ್ಯ ನೀತಿ ಮತ್ತು ಭ್ರಷ್ಟಾಚಾರದ ಆರೋಪಗಳಿವೆ ಎಂದಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಬಲವಿದ್ದವರು ಬದುಕಿಕೊಳ್ಳುತ್ತಾರೆ, ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ ಎದುರಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ಕ್ರಮವಾದರೂ ಚಿಕಿತ್ಸಾ ಶುಲ್ಕ ಕಡಿಮೆ ಮಾಡಲು ಒಪ್ಪಿರುವ ಖಾಸಗಿಯವರು ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿಯಾಗದಂತೆ ನಿಗಾ ಇಡಬೇಕು. ಸೋಂಕಿತರಿಗೆ, ನೀಡುತ್ತಿರುವ ಔಷಧಿ ಮತ್ತು ಅನುಸರಿಸಲಾಗುತ್ತಿರುವ ಚಿಕಿತ್ಸಾ ವಿಧಾನದದ ಸಂಪೂರ್ಣ ಮಾಹಿತಿಯನ್ನು ಮೊದಲೇ ನೀಡಬೇಕು ಎಂದು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.