ಬಸ್ ನಿಲ್ದಾಣಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿ: ಶೇಖರಗೌಡ ಜಿ ರಾಮತ್ನಾಳ

Create a child-friendly environment at bus stops: Shekhar Gowda G Ramatnal

ಬಸ್ ನಿಲ್ದಾಣಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿ: ಶೇಖರಗೌಡ ಜಿ ರಾಮತ್ನಾಳ 

ಕೊಪ್ಪಳ 14: ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಮಕ್ಕಳಸ್ನೇಹಿ ಮತ್ತು ಮಕ್ಕಳ ಪರವಾದ ವಾತಾವರಣ ನಿರ್ಮಾಣಕ್ಕಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಹೇಳಿದರು. ಅವರು ಗುರುವಾರ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೊಪ್ಪಳ ವಿಭಾಗ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಸ್ನೇಹಿ ಸಾರಿಗೆ ಕಾರ್ಯಕ್ರಮದ” ಅನುಷ್ಠಾನ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.  ದೇಶದ ಅಭಿವೃದ್ಧಿಯಾಗಬೇಕಾದರೆ, ಸಾರಿಗೆ ವ್ಯವಸ್ಥೆಯು ಪ್ರಮುಖವಾದ ಪಾತ್ರವಹಿಸುತ್ತದೆ. ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಮೇಲೆಯೇ ಅವಲಂಬನೆ ಅಧಿಕವಾಗಿದೆ, ಅದರಲ್ಲೂ ಗ್ರಾಮೀಣ ಭಾಗದ ಜನತೆಯ ಒಡನಾಡಿ ಸಾರ್ವಜನಿಕ ಸಾರಿಗೆಯಾಗಿದೆ. ಭಾರತ ಸಂವಿಧಾನವು ಮಕ್ಕಳಿಗೆ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣ ಹಕ್ಕು ಸಕಾರಗೊಳ್ಳುವಲ್ಲಿ ಸಾರಿಗೆ ಇಲಾಖೆಯ ಪಾತ್ರ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಸಾರಿಗೆ ಇಲಾಖೆಯ ಕೆಲವು ಸಿಬ್ಬಂದಿಗಳು ಮಕ್ಕಳೊಂದಿಗೆ ಅನುಚಿತ ವರ್ತನೆಯನ್ನು ತೊರುತ್ತೀರುವುದು ದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಕೆಲ ಜನರು ಸಿಬ್ಬಂದಿಗಳನ್ನು ಬೆದರಿಸಲು ಮಕ್ಕಳ ಪರವಾದ ಕಾಯ್ದೆಗಳ ದುರ್ಬಳಕೆಯನ್ನು ಮಾಡುತ್ತಿರುವುದು ಸಹ ಕಂಡುಬರುತ್ತಿದೆ. ಆದ್ದರಿಂದ ಆಯೋಗವು “ಮಕ್ಕಳಸ್ನೇಹಿ ಸಾರಿಗೆ ಕಾರ್ಯಕ್ರಮ” ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು. ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ವಾಹನ ಚಾಲಕರು ಮತ್ತು ನಿರ್ವಾಹಕರಿಗೆ “ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನು”ಗಳ ಕುರಿತು ತರಬೇತಿಯನ್ನು ಆಯೋಜಿಸುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣ ಮಾಡಬಹುದಾಗಿದೆ. ಮಕ್ಕಳೊಂದಿಗೆ ವ್ಯವಹರಿಸುವಾಗ ಸೌಜನ್ಯಯುತವಾಗಿ ವರ್ತಿಸುವಂತೆ ತಿಳಿಸಬೇಕು. ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್ ಸೇವೆಯನ್ನು ನೀಡಿ. ಅಲ್ಲದೇ ಸಮುದಾಯದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು, ಅವಕಾಶವಿರುವಲ್ಲಿ ಮಕ್ಕಳ ಪರವಾದ ಕಾನೂನುಗಳ ಕುರಿತು ಗೋಡೆ ಬರಹವನ್ನು ಬರೆಯಿಸಿ, ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್‌ಗಳ ಮೂಲಕ ಪ್ರಚುರಪಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೊಪ್ಪಳ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಎಮ್‌., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ನಿಗಮದ ಬಸ್ ಡಿಪೋಗಳ ವ್ಯವಸ್ಥಾಪಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.