ಬೆಂಗಳೂರು,ಜ 13: ರಾಮನಗರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪಿಸುವ ವಿವಾದ ಸಂಬಂಧ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥಿತ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಚರ್ಚಿಸಿದ್ದು, ಯಾವುದೇ ರೀತಿ ಘರ್ಷಣೆ ಆಗದೆ ನೋಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಇಂತಹ ವಿಚಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಂಡಾಗ ಪರ ವಿರೋಧ ಇದ್ದೇ ಇರುತ್ತದೆ ಎಂದರು.
ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಇದನ್ನು ಒಂದೆಡೆ ಮುನೇಶ್ವರ ಬೆಟ್ಟ ಎಂದು ಕರೆಯುತ್ತಾರೆ. ಮತ್ತೊಂದೆಡೆ ಕಪಾಲ ಬೆಟ್ಟ ಎನ್ನುತ್ತಾರೆ. ಇಲ್ಲಿ ಮೊದಲಿನಿಂದಲೂ ವಿವಾದ ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲವೂ ಗೊತ್ತಿದೆ. ಅದನ್ನೆಲ್ಲ ನಮ್ಮ ಕಂದಾಯ ಇಲಾಖೆ ನೋಡಿಕೊಳ್ಳುತ್ತದೆ ಎಂದರು.
ಪ್ರತಿಭಟನೆಗೆ ನಮ್ಮ ಪಕ್ಷದಿಂದ ಕರೆ ಕೊಟ್ಟಿಲ್ಲ. ಆ ಭಾವನೆಗಳೆಗೆ ಯಾರು ಸ್ಪಂದಿಸಬೇಕು ಅಂತ ಅನ್ನಿಸೆದೆಯೋ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿಯಲ್ಲಿ ಜಮೀರ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಬಳ್ಳಾರಿ ಎಸ್ ಪಿ ಜೊತೆ ಮಾತನಾಡಿದ್ದೇನೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿದ್ದೇನೆ. ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದರು.