ನವದೆಹಲಿ, ಫೆ 6 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದ ಮತ್ತು ಪ್ರಸ್ತಾವಿತ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾಯ್ದೆಯಿಂದ ದೇಶದಲ್ಲಿ ಭಯದ ವಾತಾವರಣ ಉಂಟಾಗಿದ್ದು, ಯುವಜನತೆ ಭವಿಷ್ಯದ ಕುರಿತು ಆತಂಕಕ್ಕೊಳಗಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸಿದವರಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ, ನೀವು ದೇಶದ ಜನರ ಹಕ್ಕುಗಳನ್ನು ಕಿತ್ತುಕೊಳ್ಳಲಾಗದು. ಜನರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸಿಎಎ ವಿರುದ್ಧ ಹೋರಾಟ ನಡೆಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದು ವಿಷಾದನೀಯ ಎಂದ ಅವರು, ಮೋದಿ ಸರ್ಕಾರ ಜಾಗತಿಕ ಗುರು ಆಗುವ ಬದಲು ಅಂತರ್ಜಾಲ ಕಡಿತಗೊಳಿಸುವಲ್ಲಿ ಜಾಗತಿಕ ಗುರುವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಯಾವ ರೀತಿಯ ಜನಾದೇಶವಿದೆ? ನಮಗೆ ನೆನಪಿರುವ ನಿಜವಾದ ಜನಾದೇಶವೆಂದರೆ 2014ಕ್ಕೂ ಮುಂಚಿನದ್ದು. ಆದರೆ, ಈ ಜನಾದೇಶಕ್ಕೆ ಪ್ರಧಾನಿ ಮನ್ನಣೆ ನೀಡುತ್ತಿಲ್ಲ ಎಂದರು.