ಕೊರೊನಾ ಪಾಸಿಟಿವ್ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಸಚಿವ ಪ್ರಭು ಚವ್ಹಾಣ್

ಬೀದರ್, ಮೇ 12,ಯಾದಗಿರಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ  ಉತ್ತಮ ರೀತಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಲಾಕ್ ಡೌನ್  ಸಡಿಲಿಕೆಯಿಂದಾಗಿ ಬೇರೆ ಬೇರೆ ರಾಜ್ಯಗಳಿಂದ ಜನರು ವಲಸೆ ಬರುತ್ತಿದ್ದಾರೆ.  ಯಾದಗಿರಿಯಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಜನತೆ  ಜಾಗರೂಕರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು ಎಂದು ಪಶು ಸಂಗೋಪನೆ, ವಕ್ಫ್, ಹಜ್  ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸುರಪುರ  ತಾಲೂಕಿನ ಮೂರು ಜನರು ಗುಜರಾತ್ ರಾಜ್ಯದ ಅಹ್ಮದಾಬಾದ ನಗರಕ್ಕೆ ಕಳೆದ ಮಾರ್ಚ್ 21ರಂದು  ತೆರಳಿದ್ದರು. ಲಾಕ್ ಡೌನ್ ಅವಧಿಯಲ್ಲಿ ಅವರು ತಮ್ಮ ಸಂಬಂಧಿಗಳ ಮನೆಯಲ್ಲಿ ಉಳಿದಿದ್ದು,  ಮೇ-9ರಂದು ಲಾರಿ ಮೂಲಕ ಬಾಗಲಕೋಟೆ ಜಿಲ್ಲೆಯ ಹುನಗುಂದ ರಸ್ತೆಯಲ್ಲಿ ಇಳಿದು ಅಲ್ಲಿಂದ  ಕಾರಿನ ಮೂಲಕ ಸುರಪುರ ಜ್ವರ ತಪಾಸಣಾ ಕೇಂದ್ರಕ್ಕೆ ಬಂದಿದ್ದಾರೆ. ಅವರ ಆರೋಗ್ಯ  ತಪಾಸಣೆ ಮಾಡಿ, ಅವರ ಗಂಟಿಲಿನ ದ್ರವವನ್ನು ಕೋವಿಡ್-19 ಪರೀಕ್ಷಾ ಕೇಂದ್ರ ಕಲಬುರಗಿಗೆ  ಕಳುಹಿಸಲಾಗಿತ್ತು. ಈ ಮಧ್ಯ ಅವರೆಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇದೀಗ  ಇವರಲ್ಲಿ ಇಬ್ಬರಿಗೆ ಕೊರೊನಾ ಪಾಲಿಟಿವ್ ಧೃಢಪಟ್ಟಿದ್ದು, ಇವರ ಸಂಪರ್ಕಕ್ಕೆ ಬಂದವರನ್ನು  ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಸಹಕಾರ ಅಗತ್ಯ
ಕೋವಿಡ್-19   ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು,  ಸಾರ್ವಜನಿಕರ ಹಿತದೃಷ್ಟಿಯಿಂದ ಹೊರರಾಜ್ಯಗಳಿಂದ ಆಗಮಿಸುತ್ತಿರುವ ವಲಸೆಗಾರರು  ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ಯಾರಾದರೂ ಬೇರೆ  ರಾಜ್ಯಗಳಿಂದ ವಲಸೆ ಬಂದಿರುವುದು ಗೊತ್ತಾದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತನ್ನಿ. ಯಾರೂ  ಸ್ವಗ್ರಾಮಕ್ಕೆ ಹೋಗಬಾರದು, ಒಂದು ವೇಳೆ ಅಂತಹವರು ಯಾರಾದರೂ ಕಂಡುಬಂದಲ್ಲಿ ಜಿಲ್ಲಾಡಳಿತದ  ಗಮನಕ್ಕೆ ತರುವಂತೆ ಸಚಿವರು ಕೋರಿದ್ದಾರೆ.
ಜಿಲ್ಲಾಡಳಿತ,  ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಉತ್ತಮ  ರೀತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ.  ಪ್ರಧಾನಮಂತ್ರಿಗಳು ಮತ್ತು ಮುಖ್ಯ  ಮಂತ್ರಿಗಳು ನೀಡುವ ಪ್ರತಿಯೊಂದು ಆದೇಶವನ್ನು ಪಾಲಿಸಬೇಕು, ಎಲ್ಲರೂ ತಮ್ಮ ತಮ್ಮ  ಮನೆಯಲ್ಲಿಯೇ ಇರಬೇಕು, ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡಬಾರದು, ಪ್ರತಿಯೊಂದು ಚೆಕ್  ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಜಿಲ್ಲೆಯ ಎಲ್ಲ ಶಾಸಕರು,  ಜನಪ್ರತಿನಿಧಿಗಳೂ ಸಹ ಉತ್ತಮ ರೀತಿಯಿಂದ ಸಹಕಾರ ಕೊಡುತ್ತಿದ್ದಾರೆ, ಜನರ ಸಹಕಾರವೂ  ಮುಖ್ಯವಾಗಿದ್ದು ಜನರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.