ಕೊರೋನಾ ಸೋಂಕು ಹಿನ್ನೆಲೆ ವೈದ್ಯರು ಸೇರಿ 810 ವೈದ್ಯಕಿ ಸಿಬ್ಬಂದಿಯ ನೇಮಕಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಮಾ.31,ಕೊರೋನಾ ಸೋಂಕು ತಡೆಗಟ್ಟಲು ವೈದ್ಯಕೀಯ ಸಿಬ್ಬಂದಿ ಕೊರತೆ ಇರುವುದನ್ನು ಮನಗಂಡ ಸರ್ಕಾರ, ಸಿಬ್ಬಂದಿಯ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.ಆಸ್ಪತ್ರೆಗಳಲ್ಲಿ  ದಿನದ 24 ಗಂಟೆ ಪಾಳಿಯಲ್ಲಿ ಕೆಲಸ ಮಾಡಲು ಹೆಚ್ಚು ವೈದ್ಯಕೀಯ ಸಿಬ್ಬಂದಿ  ಅಗತ್ಯವಿರುವುದರಿಂದ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ  ಡಿ ದರ್ಜೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಅಥವಾ  ಹೊರಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಮಾತ್ರ ಈ ಹುದ್ದೆಗಳನ್ನು  ಭರ್ತಿ ಮಾಡಿಕೊಳ್ಳಲಾಗುತ್ತದೆ. ರಾಜ್ಯದ 18 ಜಿಲ್ಲೆಗಳ ಪೈಕಿ, ಪ್ರತಿ ಜಿಲ್ಲೆಗೆ 45 ಜನರಂತೆ ಒಟ್ಟು 810  ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ವೈದ್ಯರಿಗೆ ಪ್ರತಿ ತಿಂಗಳಿಗೆ 60 ಸಾವಿರ,  ಶುಶ್ರೂಷಕರಿಗೆ 20 ಸಾವಿರ, ಪ್ರಯೋಗಶಾಲಾ ತಂತ್ರಜ್ಞರಿಗೆ 15 ಸಾವಿರ, ಡಿ ದರ್ಜೆ  ನೌಕರರಿಗೆ 12 ಸಾವಿರ ವೇತನ ನಿಗದಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ಅರ್ಜಿ  ಆಹ್ವಾನ: ಇದೇ ಉದ್ದೇಶಕ್ಕೆ ಬಿಬಿಎಂಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ವೈದ್ಯ ಹುದ್ದೆಗಳಿಗೆ ಅರ್ಜಿ  ಆಹ್ವಾನಿಸಲಾಗಿದೆ. ಎರಡರಿಂದ ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.