ಬೆಂಗಳೂರು, ಏ.8,ಬೆಂಗಳೂರು ಮಹಾನಗರದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಬಿಬಿಎಂಪಿಗೆ 15 ಕೋಟಿ ರೂ.ಗಳ ನೆರವನ್ನು ಬಿಡುಗಡೆ ಮಾಡಿದ.ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಕೊರೊನಾ ಸೋಂಕು ತಡೆಗೆ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಪಾಲಿಕೆ ಆರೋಗ್ಯ ವಿಭಾಗದಿಂದ ಚಿಕಿತ್ಸೆ ಅಲ್ಲದೆ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರದ ವ್ಯವಸ್ಥೆಯಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.ಬಿಬಿಎಂಪಿ ಬಜೆಟ್ ಇನ್ನು ಮಂಡನೆಯಾಗಿಲ್ಲ, ಸದ್ಯದ ಆರ್ಥಿಕ ಸಂಕಷ್ಟದಿಂದ ದೂರವಾಗಲು ಸಾರ್ವಜನಿಕರು ಆನ್‌ಲೈನ್ ಮೂಲಕ ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಕಟ್ಟಬೇಕು ನಾಗರಿಕರು ಶೇ. 5ರಷ್ಟು ರಿಯಾಯಿತಿಯೊಂದಿಗೆ ಈ ತಿಂಗಳ ಅಂತ್ಯದವರೆಗೆ ತೆರಿಗೆಯನ್ನು ಕಟ್ಟಬಹುದಾಗಿದೆ. ಒಂದು ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾರದಿದ್ದಲ್ಲಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಬಹುತೇಕ ಎಲ್ಲ ವಹಿವಾಟು-ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿರುವುದು ನಿಜ, ನಾಗರಿಕರು ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಅವರ ಮೇಲೆ ಆಸ್ತಿ ತೆರಿಗೆ ಮನವಿ ಮಾಡಬಹುದೇ ಹೊರತು ಒತ್ತಡ ಹೇರುವಂತಿಲ್ಲ ಎಂದು ತಿಳಿಸಿದರು. ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಅಧಿಕಾರಿ ಮತ್ತು ನೌಕರರ ವೇತನವನ್ನು ಕಡಿತಗೊಳಿಸುವ ನಿರ್ಧಾರ ಸದ್ಯ ನಮ್ಮ ಮುಂದಿಲ್ಲ. ಪೌರ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೂ ಕೂಡ ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವೇತನವನ್ನು ಕಡಿತಗೊಳಿಸುವಂತಿಲ್ಲ ಎಂದ ಅನಿಲ್ ಕುಮಾರ್, ಸರ್ಕಾರ ವೇತನ ಕಡಿತದಂತಹ ತೀರ್ಮಾನಗಳನ್ನು ಕೈಗೊಂಡು ಪಾಲಿಕೆಗೆ ಸೂಚಿಸಿದರೆ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.