ನವದೆಹಲಿ,
ಏ 18, ಭಾರತದಲ್ಲಿ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ 14 ಸಾವಿರ ದಾಟಿದೆ
ಎಂದು ಶನಿವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ವರದಿ ತಿಳಿಸಿದೆ. ಒಟ್ಟು
ಸೋಂಕಿತರ ಸಂಖ್ಯೆ 14,378 ಕ್ಕೆ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 705 ಹೊಸ
ಪ್ರಕರಣಗಳು ವರದಿಯಾಗಿವೆ. ಈ ಸೋಂಕಿನಿಂದ ಈವರೆಗೆ 480 ಜನರು ಮೃತಪಟ್ಟಿದ್ದು
ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. 1991 ಜನರು
ಗುಣಮುಖರಾಗಿದ್ದು ಸದ್ಯ 11906 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 43 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಗುಣಮುಖರಾದವರ ಸಂಖ್ಯೆಯೂ
ತುಸು ಹೆಚ್ಚಾಗಿದ್ದು ಈವರೆಗೆ 1991 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 3323 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 201 ಜನರು
ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ದೆಹಲಿಯಲ್ಲಿ 1707 ಸೋಂಕು ಪ್ರಕರಣಗಳು
ವರದಿಯಾಗಿದ್ದು 42 ಜನರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1310 ಪ್ರಕರಣಗಳು
ವರದಿಯಾಗಿದ್ದು 69 ಜನರು ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ 1099 ಜನರಿಗೆ ಸೋಂಕು
ತಗುಲಿದ್ದು 41 ಜನರು ಮೃತಪಟ್ಟಿದ್ದಾರೆ ತಮಿಳುನಾಡು ಮತ್ತು ರಾಜಸ್ತಾನಗಳಲ್ಲೂ
ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು ಸೋಂಕಿತರ ಸಂಖ್ಯೆ ಕ್ರಮವಾಗಿ 1323 ಮತ್ತು 1229
ರಷ್ಟಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ರಾಜಸ್ತಾನ, ಮಧ್ಯಪ್ರದೇಶ ಮತ್ತು
ಗುಜರಾತ್ ಗಳಲ್ಲಿ ಕಳೆದೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಳ ಕಂಡಿದೆ.