ಭಾರತದಲ್ಲಿ ಐದು ಸಾವಿರ ದಾಟಿದ ಕೊರೊನಾ ಸೋಂಕಿತರು, 149 ಸಾವು, 441 ಜನರು ಗುಣಮುಖ

ನವದೆಹಲಿ, ಏ 8,ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ ಬೆಳಗಿನ ವೇಳೆಗೆ 5194 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ 4643 ಜನರು ಸೋಂಕಿನಿಂದ ಬಳಲುತ್ತಿದ್ದು ಮಂಗಳವಾರ ಸಂಜೆಯ ನಂತರ 331 ಹೊಸ ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಸಂಜೆಯ ನಂತರ ದೇಶಾದ್ಯಂತ 25 ಜನರು ಈ ಸೋಂಕಿನಿಂದ ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 149 ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆಯೂ ಹೆಚ್ಚಾಗಿದ್ದು ಮಂಗಳವಾರ ಸಂಜೆ 352 ರಷ್ಟಿದ್ದ ಚೇತರಿಸಿಕೊಂಡವರ ಸಂಖ್ಯೆ ಇದೀಗ 441 ಕ್ಕೆ ಏರಿಕೆಯಾಗಿದೆಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1018 ರಷ್ಟಿದ್ದು 64 ಜನರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 609, ದೆಹಲಿಯಲ್ಲಿ 576 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಳೆದ ಎರಡು ಮೂರು ದಿನಗಳಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ತೆಲಂಗಾಣ ಮತ್ತು ಉತ್ತರಪ್ರದೇಶಗಳಲ್ಲಿ ಹೆಚ್ಚಿದೆ ಎಂದು ಅಂಕಿ ಅಂಶ ತಿಳಿಸಿದೆ.ಓರ್ವ ಸೋಂಕಿತ ವ್ಯಕ್ತಿ 30 ದಿನಗಳಲ್ಲಿ ಸುಮಾರು 406 ಜನರಿಗೆ ಸೋಂಕು ಹರಡಬಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಮಾರ್ಟ್ ಸಿಟಿಗಳಲ್ಲಿ ಸೋಂಕಿತರ ಪತ್ತೆಗೆ, ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಲು, ಮಾಹಿತಿ ಪಡೆಯಲು, ವಿಶ್ಲೇಷಣೆ ಮೊದಲಾದ ಕಾರ್ಯಗಳಿಗೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಲಾಗುತ್ತಿದೆ. ಪುಣೆ, ಸೂರತ್, ಬೆಂಗಳೂರು ಮತ್ತು ತುಮಕೂರಿನಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದೆ.ಸುಮಾರು 25,500 ಜಮಾತ್ ಕಾರ್ಯಕರ್ತರು ಮತ್ತವರ ಸಂಬಂಧಿಕರು, ಸ್ನೇಹಿತರನ್ನು ಪ್ರತ್ಯೇಕವಾಗಿರಿಸಲಾಗಿದೆ. 1750 ವಿದೇಶಿ ತಬ್ಲಿಘಿ ಕಾರ್ಯಕರ್ತನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.