ನವದೆಹಲಿ, ಮೇ ೨, ದೇಶದಲ್ಲಿ ಕೊರೊನಾ ವೈರಾಣು ಬಾಧೆ ದಿನ ದಿನಕ್ಕೂ ಉಲ್ಬಣಗೊಳ್ಳುತ್ತಿದೆ. ಲಾಕ್‌ಡೌನ್ ನಂತಹ ಕಠಿಣ ಕ್ರಮಗಳ ಜಾರಿಯೇ ವೈರಸ್ ನಿಯಂತ್ರಣಕ್ಕಿರುವ ಏಕೈಕ ಮಾರ್ಗವಾಗಿದೆ. ಈ ಭಾಗವಾಗಿ ದೆಹಲಿಯಲ್ಲಿ ಲಾಕ್‌ಡೌನ್ ಜಾರಿ ಕರ್ತವ್ಯ ನಿರ್ವಹಿಸುತ್ತಿದ್ದ ೧೨೨ ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇನ್ನೂ ೧೦೦ ಮಂದಿಯ ಪರೀಕ್ಷಾ ವರದಿಗಳು ಬರಬೇಕಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಸೋಂಕಿಗೆ ಒಳಗಾಗಿರುವವರು ಬೆಟಾಲಿಯನ್ ೩೧ಕ್ಕೆ ಸೇರಿದ ಅರೆಸೇನಾಪಡೆಯ ಯೋಧರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ದೆಹಲಿಯ ಮಯೂರ್ ವಿಹಾರ್ ಮೂರನೇ ಹಂತದಲ್ಲಿ ಈ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆ ದೆಹಲಿಯ ನರೇಲಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್ ನ ೧೨ ಮಂದಿ ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇದರಿಂದಾಗಿ ಆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ೪೭ ಮಂದಿಯನ್ನು ಸೆಲ್ಪ್ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.