ಕೊರೋನಾ ವೈರಸ್, ಕೇರಳದಲ್ಲಿ 430 ಜನರ ಮೇಲೆ ವಿಶೇಷ ನಿಗಾ

ನವದೆಹಲಿ, ಜ 28 :       ಚೀನಾದಲ್ಲಿ ಮಹಾಮಾರಿ  ಕೊರೋನಾ ವೈರಸ್ ಅನೇಕರನ್ನು ಬಲಿ ತೆಗೆದುಕೊಂಡು ಬಹಳ ಫಜೀತಿ, ಆತಂಕ ಉಂಟುಮಾಡಿರುವ ಕಾರಣ,  ಕೇರಳದಲ್ಲಿ 430ಕ್ಕೂ ಅಧಿಕ ಮಂದಿಯನ್ನು ಅವರ ಮನೆಗಳಲ್ಲಿಯೇ ನಿಗಾದಲ್ಲಿರಿಸಲಾಗಿದೆ.

 ಚೀನಾದಲ್ಲಿ  ಈಗಾಗಲೇ 106 ಜನರನ್ನು ಬಲಿ ಪಡೆದಿದ್ದು 4,000ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ,   ತಪಾಸಣೆ ನಡೆಸಲಾಗುತ್ತಿದೆ. 

ಇಲ್ಲಿಯ ತನಕ 30, ಸಾವಿರ  ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೇರಳದ ಮೂರು ನಗರಗಳಲ್ಲಿ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ ಗಳಲ್ಲಿ ವೈದ್ಯಕೀಯ ನಿಗಾದ ಮೇಲಿದ್ದ ಏಳು ಮಂದಿಯ ಪೈಕಿ ಆರು ಮಂದಿಯ ವರದಿ ನೆಗೆಟಿವ್ ಆಗಿದ್ದು,  ಇನ್ನುಳಿದವರೊಬ್ಬರ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. 

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಹೊಸ ತಪಾಸಣೆ ಸೌಲಭ್ಯ ಆರಂಭವಾಗಿದೆ. 

ದೆಹಲಿಯ  ಸರಕಾರಿ ಆರ್ ಎಂಎಲ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಲಕ್ಷಣಗಳನ್ನು ಹೊಂದಿರುವ ಮೂವರನ್ನು ವೈದ್ಯರ ನಿಗಾದಲ್ಲಿರಿಸಲಾಗಿದೆ. ಮುಂಬೈಯಲ್ಲಿ ನಾಲ್ಕು ಮಂದಿಯನ್ನು ಆಸ್ಪತ್ರೆಗಳ ಪ್ರತ್ಯೇಕ ವಾರ್ಡಿನಲ್ಲಿ ನಿಗಾದಲ್ಲಿರಿಸಲಾಗಿದೆ. 

ಜನವರಿ 1ರಿಂದೀಚೆಗೆ ಚೀನಾಗೆ ಪ್ರಯಾಣ ಮಾಡಿದವರು  ಜ್ವರ, ಕೆಮ್ಮು, ಶ್ವಾಸಕೋಶ ಮತ್ತು ಇತರೆ ಸಮಸ್ಯೆಗಳಿದ್ದಲ್ಲಿ  ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕೆಂದೂ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟ ಸೂಚನೆ ನೀಡಿದೆ.