ನವದೆಹಲಿ, ಏ 18, ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದಾಗಿ ಮಾಲಿನ್ಯ ತಗ್ಗಿದೆ,
ಪ್ರಾಣಿಗಳಿಗೆ ಚೈತನ್ಯ ಸಿಕ್ಕಿದೆ ಹೀಗೆ ಕೆಲವು ಸಂತಸಕರ ಸಂಗತಿಗಳು
ವರದಿಯಾಗುತ್ತಿದ್ದರೂ ಇದರಿಂದ ಅನೇಕ ವಿಧದ ನೇರ ಮತ್ತು ಪರೋಕ್ಷ ದುಷ್ಪರಿಣಾಮಗಳಿವೆ. ಈ
ದಿಗ್ಬಂಧನದಿಂದಾಗಿ ಹಸಿವು, ಬಡತನದಿಂದ ನರಳುತ್ತಿರುವವರು ಒಂದೆಡೆಯಾದರೆ, ಅತಂತ್ರದಲ್ಲಿ
ಸಿಲುಕಿ ರೋಧನೆ ಅನುಭವಿಸುತ್ತಿರುವವರು ಮತ್ತೊಂದೆಡೆ. ಹಾಗೇ ಮನೆಯಲ್ಲೇ ಇದ್ದು
ಅತಂತ್ರರಾಗದೇ ಎಲ್ಲ ಸೌಲಭ್ಯ, ಸೌಕರ್ಯಗಳಿದ್ದರೂ ಈ ದಿಗ್ಬಂಧನ ಕಾಡಲಿದೆ. ಇದು
ದೀರ್ಘಕಾಲಿನ ದುಷ್ಪರಿಣಾಮ ಬೀರುವ ಅಪಾಯವಿದೆ ಎನ್ನುತ್ತದೆ ಒಂದು ಅಧ್ಯಯನ.ಈ ಲಾಕ್
ಡೌನ್ ನಿಂದಾಗಿ ಜಾಗತಿಕವಾಗಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿದೆ. ಏಕಾಂತತೆ,
ಖಿನ್ನತೆ ಕಾಡಿದ್ದು ಇದು ನಂತರದ ದಿನಗಳಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುವ ಅಪಾಯವನ್ನು
ತಳ್ಳಿಹಾಕುವಂತಿಲ್ಲ.
ಈಗಿನ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಏಕಾಂತತೆಯ ಭಾವ
ಕಾಡುತ್ತಿದ್ದು ಕೊರೊನಾ ದಿಗ್ಬಂಧನ ಅದನ್ನು ಹೆಚ್ಚಿಸಿದೆ. ಪೋಷಕರೂ ಕೂಡ ಮನೆಯಲ್ಲೇ
ಇರುವುದರಿಂದ ಮಕ್ಕಳಿಗೆ ಒಂಟಿ ಎಂಬ ಭಾವನೆ ಬರಲಾರದು ಎಂದು ಹೇಳಲಾಗುವುದಿಲ್ಲ.
ಮಕ್ಕಳೊಂದಿಗೆ ಪೋಷಕರು ಎಷ್ಟು ಸಮಯ ಕಳೆದಾರು? ದಿನಪೂರ್ತಿ ಮಕ್ಕಳಿಗೆ ಪೋಷಕರೊಂದಿಗೇ
ಇರಲು ಮನಸ್ಸಾಗುವುದಿಲ್ಲ. ತಮ್ಮ ವಯೋಮಾನದ ಮಕ್ಕಳೊಂದಿಗೆ ಬೆರೆತು ಆಡುವುದು ಸಹಜ
ಬಯಕೆಯಾಗಿರುತ್ತದೆ. ಮಕ್ಕಳೊಂದಿಗೆ ಆಟವಾಡಿ, ಅವರೊಂದಿಗೆ ಚಿತ್ರ ಬಿಡಿಸುವುದು, ಕಥೆ
ಹೇಳುವುದು ಹೀಗೆ ಎಷ್ಟೇ ಪೋಷಕರು ಮಕ್ಕಳೊಂದಿಗೆ ಸಮಯ ಕಳೆದರೂ ಅವರಲ್ಲಿ ಏಕತಾನತೆ
ಕಾಡುತ್ತದೆಯಂತೆ.ಇನ್ನು ದಿನಪೂರ್ತಿ ಮಕ್ಕಳೊಂದಿಗೆ ಪೋಷಕರು ಸಮಯ ಕಳೆಯಲಾರರು.
ಅವರಿಗೆ ಮನೆಗೆಲಸ, ಇನ್ನು ಕೆಲವರಿಗೆ ವರ್ಕ್ ಫ್ರಂ ಹೋಂ ನಲ್ಲಿ ಕೆಲಸಕ್ಕೆ ಗಮನ
ಕೊಡಲಾಗುವುದಿಲ್ಲ, ಆದರೆ ಇನ್ನು ಕೆಲವರಿಗೆ ಮನೆಯನ್ನೂ ಗಮನಿಸಲೂ ಆಗುವುದಿಲ್ಲ.
ಈಗಿನ ಸಂದರ್ಭದಲ್ಲಿ ನೆರೆ ಹೊರೆಯ ಮಕ್ಕಳೊಂದಿಗೆ ಆಟವಾಡಲೂ ಆಗದೇ ಏಕಾಂತತೆಯ ಬೇಸರ ಮಕ್ಕಳ
ಮೇಲೆ ದುಷ್ಪರಿಣಾಮ ಬೀರುವ ಅಪಾಯವಿದ್ದು ಪೋಷಕರು ಈಗ ಮಕ್ಕಳತ್ತ ಹೆಚ್ಚು ಗಮನಹರಿಸುವುದು
ಅಗತ್ಯವಾಗುತ್ತದೆ. ಮಕ್ಕಳಲ್ಲಿ ಈಗ ಘೋಷಿಸಲಾಗಿರುವ ಲಾಕ್ ಡೌನ್ ಒಳಿತಿಗಾಗಿ ಎಂಬ
ಬಗ್ಗೆ ಅರಿವು ಮೂಡಿಸಬೇಕು. ಈ ದಿಗ್ಬಂಧನ ತಾತ್ಕಾಲಿಕ ಮಾತ್ರ, ಅದು ಅನಿವಾರ್ಯ
ಎಂಬುದನ್ನು ಮನದಟ್ಟು ಮಾಡಿಸಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಗಮನಹರಿಸಬೇಕು.ಮಕ್ಕಳಿಗೆ ಶಾಲೆ ಇಲ್ಲ ಎಂಬುದು ಒಂದು ರೀತಿಯ ಸಂಭ್ರಮವಾದರೆ, ಪಾರ್ಕ್ ಗೆ
ಹೋಗುವಂತಿಲ್ಲ, ಆಟ ಆಡುವಂತಿಲ್ಲ ಎಂಬುದು ಶಾಲೆಗೆ ಹೋಗಬೇಕು ಎನ್ನುವುದಕ್ಕಿಂತ ಹೆಚ್ಚಿನ
ಕಿರಿಕಿರಿಯುಂಟು ಮಾಡುತ್ತದೆಯಂತೆ. ಹೀಗಾಗಿ ಮಕ್ಕಳನ್ನು ಒಬ್ಬಂಟಿ ಮಾಡದೇ ಅವರೊಂದಿಗೆ
ಪೋಷಕರು ಕಾಲ ಕಳೆಯಬೇಕಿದೆ.ಮಕ್ಕಳನ್ನು ಮನೆಗೆಲಸಕ್ಕೂ ಸೇರಿಸಿಕೊಳ್ಳಬಹುದು.
ರಾಮಾಯಣ, ಮಹಾಭಾರತದ ಕಥೆಗಳ ಮೂಲಕ ರಂಜಿಸಬಹುದು. ಹಳೆಯ ಆಲ್ಬಂಗಳನ್ನು ತೋರಿಸಿ ಸಂಬಂಧ
ಬಲವರ್ಧನೆಯ ಪ್ರಯತ್ನ ಮಾಡಬಹುದು. ಮನೆಯಲ್ಲಿ ಹೆಚ್ಚುತ್ತಿರುವ ಕೌಟುಂಬಿಕ
ಹಿಂಸೆಯೂ ಮಕ್ಕಳ ಮನಸ್ಸಿನ ಮೇಲೆ ದುಷ್ಪ್ರಭಾವ ಬೀರಬಹುದಾಗಿದೆ. ಹೀಗಾಗಿ ಕುಟುಂಬದಲ್ಲಿ
ಸಾಮರಸ್ಯ ಅಗತ್ಯವಿದೆ. ಮಕ್ಕಳ ಲಾಲನೆ, ಪಾಲನೆಗೆ ಮಾತ್ರ ಸಮಯ ಸೀಮಿತಗೊಳಿಸದೇ ಮಕ್ಕಳಿಗೆ
ಒಂಟಿತನದ ಭಾವ ಕಾಡದಂತೆ ನೋಡಿಕೊಳ್ಳಬೇಕಿದೆ. ಈ ಮೂಲಕ ಮಕ್ಕಳ ಮನಸ್ಸಿನ ಮೇಲಾಗುವ
ದಿಗ್ಬಂಧನದ ದುಷ್ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದಾಗಿದೆ ಎಂಬುದು ತಜ್ಞರ
ಅಭಿಪ್ರಾಯವಾಗಿದೆ.