ಕೊರೊನಾ ಸೋಂಕು 4421 ಜನರಲ್ಲಿ ಪತ್ತೆ, 114 ಸಾವು, 325 ಜನರು ಗುಣಮುಖ

ನವದೆಹಲಿ, ಏ 7 ,ಮಂಗಳವಾರ ಬೆಳಗಿನ ವೇಳೆಗೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4421 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ 3981 ಜನರು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ಸಂಜೆಯಿಂದ ಮೂವರು ಈ ಸೋಂಕಿಗೆ ಬಲಿಯಾಗಿದ್ದು ಒಟ್ಟು 114 ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ 325 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.  ಒಟ್ಟು ಸೋಂಕಿತರ ಪೈಕಿ 1445 ಪ್ರಕರಣಗಳು ತಬ್ಲಿಕ್ ಜಮಾತ್ ಸಂಘಟನೆಗೆ ಸೇರಿದವಾಗಿದೆ.  ಸುಮಾರು 2,55,000 ಜಮಾತ್ ಕಾರ್ಯಕರ್ತರು ಮತ್ತು ಅವರ ಸಂಪರ್ಕ ಹೊಂದಿದವರನ್ನು ಪ್ರತ್ಯೇಕವಾಗಿರಿಸಲಾಗಿದೆ. 1750 ವಿದೇಶಿ ತಬ್ಲಿಕ್ ಕಾರ್ಯಕರ್ತರನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಕಳೆದೆರಡು ಮೂರು ದಿನಗಳಲ್ಲಿ ದೆಹಲಿ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಹೆಚ್ಚಳ ಕಂಡಿದೆ. ಮಹಾರಾಷ್ಟ್ರದಲ್ಲಿ 748 ಪ್ರಕರಣಗಳು, ತಮಿಳುನಾಡಿನಲ್ಲಿ 621, ದೆಹಲಿಯಲ್ಲಿ 525 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.