ಬೆಂಗಳೂರು, ಜೂನ್ 30: ಕರೊನ ಸೋಂಕು ನಿಯಂತ್ರಿಸಲು ಸರ್ಕಾರದ ಜೊತೆಗೆ ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು 4,500 ಸಾವಿರ ಬೆಡ್ ಗಳನ್ನು ಕೋವಿಡ್ ಗೆ ಮೀಸಲಿರಿಸಲು ಸಮ್ಮತಿಸಿವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಮಾತನಾಡಿದ ಬಳಿಕ ಮುಖ್ಯಮಂತ್ರಿಗಳು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಖಾಸಗಿ ಆಸ್ಪತ್ರೆಯ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೂ 50 ಲಕ್ಷ ರೂ. ಮೊತ್ತದ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಕಳೆದ ನಾಲ್ಕು ತಿಂಗಳಿಂದ ಹತ್ತು ವೈದ್ಯಕೀಯ ಕಾಲೇಜುಗಳು ಹೊರತು ಪಡಿಸಿ, ಇತರ ಎಲ್ಲ ಕಾಲೇಜುಗಳು ಪ್ರಯೋಗಾಲಯ ವ್ಯವಸ್ಥೆ ಮಾಡಿವೆ. ಸರ್ಕಾರಿ ಕಾಲೇಜುಗಳಲ್ಲಿ 2000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4500 ಸೇರಿದಂತೆ ಸುಮಾರು 6500 ಹಾಸಿಗೆಗಳು ಬೆಂಗಳೂರಿನ ವೈದ್ಯಕೀಯ ಕಾಲೇಜುಗಳಲ್ಲಿಯೇ ಲಭ್ಯವಾಗುತ್ತಿವೆ. ಸಭೆಯಲ್ಲಿ ವೈದ್ಯಕೀಯ ಕಾಲೇಜುಗಳು ಸರ್ಕಾರದೊಂದಿಗೆ ಕೈಜೋಡಿಸಿ, ಕೋವಿಡ್ ಚಿಕಿತ್ಸೆಗೆ ಸಹಕರಿಸುವ ಭರವಸೆನೀಡಿವೆ ಇದಕ್ಕೆ ಸಿದ್ಧತೆಗಳು ಮಾಡಿಕೊಳ್ಳಬೇಕಾಗಿರುವುದರಿಂದ ಹಂತ ಹಂತವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಕುರಿತಂತೆ ಕೇಂದ್ರೀಕೃತ ವ್ಯವಸ್ಥೆಯನ್ನು ಈಗಾಗಲೇ ಬಿಬಿಎಂಪಿಯಲ್ಲಿ ಮಾಡಲಾಗಿದ್ದು, ಎರಡು ಮೂರು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಕರೋನ ಚಿಕಿತ್ಸೆ ನೀಡುವ ಎಲ್ಲ ಆಸ್ಪತ್ರೆಗಳನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಲು ಸಹ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದಲ್ಲದೆ ಕೋವಿಡ್ ಕೇರ್ ಸೆಂಟರ್ ಗಳಿಗೆ ಅಗತ್ಯ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಮೊದಲಾದ ವರು ಹಾಜರಿದ್ದರು.