ಕೊರೊನಾ ಭೀತಿ : ನ್ಯಾಯಾಲಯ ಸಿಬ್ಬಂದಿ, ವಕೀಲರು, ಕಕ್ಷಿದಾರರ ತಪಾಸಣೆ

ಬಾಗಲಕೋಟೆ19: ಕೊರೊನಾ ಭೀತಿ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸುವ ನ್ಯಾಯಾಧೀಶರು, ವಕೀಲರು ನ್ಯಾಯಾಲಯದ ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಮುಖ್ಯದ್ವಾರದಲ್ಲಿಯೇ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನೀಲ ಕಟ್ಟಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು ಉಚ್ಛ ನ್ಯಾಯಾಲಯದ ಆದೇಶದನ್ವಯ ಕೊರೊನಾ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿ ದಿನ ನ್ಯಾಯಾಲಯಕ್ಕೆ ಆಗಮಿಸುವ ನ್ಯಾಯಾಲಯದ ಸಿಬ್ಬಂದಿಗಳು ಸೇರಿದಂತೆ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಪಾಸಣೆಯ ನಂತರವೇ ನ್ಯಾಯಾಲಯದ ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದರು. 

ಆರೋಗ್ಯ ತಪಾಸಣೆ ವೇಳೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನ್ಯಾಯಾಲಯದ ಸಿಬ್ಬಂದಿ, ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಕಾಲಕಾಲಕ್ಕೆ ಕೈಗಳನ್ನು ಸ್ವಚ್ಛವಾಗಿಡುವು, ಕೆಮ್ಮುವಾಗ ಕೈಯನ್ನು ಅಡ್ಡಲಾಗಿ ಹಿಡಿಯುವದು, ಇಲ್ಲವೇ ಕರವಸ್ತ್ರವನ್ನು ಹಿಡಿಯುವ ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲ ನ್ಯಾಯಾಲಯಗಳಲ್ಲಿ ಸೈನಟೈಜರ್ ಇಡಲಾಗಿದೆ. ನ್ಯಾಯಾಲಯಕ್ಕೆ ಆಗಮಿಸುವಾಗ ಹಾಗೂ ನ್ಯಾಯಾಲಯದಿಂದ ಹೋರಗುವಾಗ ಕಡ್ಡಾಯವಾಗಿ ಕೈತೊಳೆದುಕೊಂಡು ಹೋಗುವಂತೆ ತಿಳಿಸಲಾಗಿದೆ.

   ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಬರುವ ಎಲ್ಲ ನ್ಯಾಯಾಲಯಗಳಿಗೆ ಆಗಮಿಸುವವರನ್ನು ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿಯೊಂದು ನ್ಯಾಯಾಲಯದಲ್ಲಿ ಆರೋಗ್ಯ ಇಲಾಖೆಯಿಂದ ತಂಡಗಳನ್ನು ನೀಡಿದ್ದು, ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 4.30 ವರೆಗೆ ನ್ಯಾಯಾಲಯದ ಮುಖ್ಯದ್ವಾರದಲ್ಲಿ ತಪಾಸಣೆ ಮಾಡಿ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಜಿಲ್ಲಾ ನ್ಯಾಯಾಲಯ ಸೇರಿ ಎಲ್ಲ ತಾಲೂಕಾ ನ್ಯಾಯಾಲಯಗಳಿಗೆ ಪ್ರವೇಶಿಸುವ ಒಟ್ಟು 1870 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ತಪಾಸಣೆ ವೇಳೆ ಯಾವುದೇ ರೀತಿಯ ಕೊರೊನಾ ಸೊಂಕಿನ ಪ್ರಕರಣಗಳು ಕಂಡುಬಂದಿಲ್ಲ. ಯಾರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾರ್ವಜನಿಕರು ಕೊರೊನಾ ಸೊಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ನ್ಯಾ.ಅನೀಲ ಕಟ್ಟಿ ತಿಳಿಸಿದ್ದಾರೆ.