ಕೊರೊನಾ ಲಾಕ್ ಡೌನ್ : ಹೆಚ್ಚುವರಿ ವಿನಾಯಿತಿ

ನವದೆಹಲಿ, ಮಾರ್ಚ್ 30, ಕೊರೊನಾ ಸೋಂಕು ನಿಯಂತ್ರಣ ಸಂಬಂಧ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ಸರಕು ಮತ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು ಇದರ ಮೂರನೇ ಪಟ್ಟಿಯನ್ನು ಗೃಹ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದೆ.ಈ ಮೂರನೇ ಪಟ್ಟಿಯಡಿ ಅಗತ್ಯ ಮತ್ತು ಅನಗತ್ಯ ಎಂಬ ಭೇದವಿಲ್ಲದೇ ಎಲ್ಲಾ ಬಗೆಯ ಸರಕು ಸಾಗಣೆಗೆ ಅವಕಾಶ ನೀಡಲಾಗಿದೆ.ಪಿಂಚಣಿ ಮತ್ತು ಭವಿಷ್ಯ ನಿಧಿ ಸೇವೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸೇವೆಗೂ ದಿಗ್ಬಂಧನದಿಂದ ವಿನಾಯಿತಿ ನೀಡಲಾಗಿದೆ.ಹ್ಯಾಂಡ್ ವಾಷ್, ಸೋಪ್, ಬಾಡಿ ವಾಷ್, ಶಾಂಪೂ, ಡಿಟರ್ಜೆಂಟ್, ಟಿಷ್ಯೂ ಪೇಪರ್, ಟೂತ್ ಪೇಸ್ಟ್, ಸ್ಯಾನಿಟರಿ ಪ್ಯಾಡ್, ಡೈಪರ್ಸ್, ಬ್ಯಾಟರಿ, ಸೆಲ್, ಚಾರ್ಜರ್ ಸೇರಿದಂತೆ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಹಾಲು ಸಂಗ್ರಹದಿಂದ ಹಿಡಿದು ಪೂರೈಕೆವರೆಗಿನ ಎಲ್ಲ ಹಂತಗಳು ಪ್ಯಾಕಿಂಗ್ ಸೇರಿದಂತೆ ಇಡೀ ಪೂರೈಕೆ ವ್ಯವಸ್ಥೆಗೆ ವಿನಾಯಿತಿ ನೀಡಲಾಗಿದೆ.ಮುದ್ರಣ ಮಾಧ್ಯಮದ ದಿನಪತ್ರಿಕೆ ಪೂರೈಕೆಗೂ ವಿನಾಯಿತಿ ನೀಡಲಾಗಿದೆ.ಈ ವಿನಾಯಿತಿಗಳನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ತಿಳಿಸಲಾಗಿದೆ.