ಕೊರೋನಾ ಎಫೆಕ್ಟ್ : ಚಿತ್ರರಂಗ ಸಂಪೂರ್ಣ ಸ್ತಬ್ಧ, 200 ಕೋಟಿ ರೂ ನಷ್ಟ! ಅನಿಶ್ಚಿತತೆ ಎಲ್ಲಿಯವರೆಗೆ?

ಬೆಂಗಳೂರು, ಏ 14,ವಿಶ್ವವನ್ನೇ ಸಂಕಷ್ಟಕ್ಕೀಡುಮಾಡಿರುವ ಕೊರೋನಾ ಮಹಾ ಮಾರಿ ಗಹಗಹಿಸುತ್ತಲೇ ಇದ್ದು, ಎಲ್ಲೆಡೆ ಕಬಂಧ ಬಾಹುವನ್ನು ಚಾಚುತ್ತಿದೆ  ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಿರುವ ಲಾಕ್ ಡೌನ್ ಮತ್ತೆ ವಿಸ್ತರಣೆಯಾಗಿದೆ  ಇದು ಅನಿವಾರ್ಯ ಹಾಗೂ ದೇಶದ ನಾಗರಿಕರಾಗಿ ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವೂ ಹೌದು  ಆದಾಗ್ಯೂ, ಮನರಂಜನಾ ವಲಯಗಳಾದ ಚಿತ್ರರಂಗ ಹಾಗೂ ಕಿರುತೆರೆಯ ಬಡ ತಾಂತ್ರಿಕ ವರ್ಗ, ಇದನ್ನೇ ನೆಚ್ಚಿಕೊಂಡಿರುವ, ಅವಲಂಬಿಸಿಕೊಂಡಿರುವ ಕ್ರಿಯಾಶೀಲ ವರ್ಗಗಳಾದ ನಿರ್ದೇಶಕರು, ಬರಹಗಾರರು ಕಂಗೆಟ್ಟಿರುವುದಂತೂ ನಿಜ ಇನ್ನು, ಚಿತ್ರಗಳ ಬಿಡುಗಡೆಗೆ ಸಜ್ಜಾಗಿದ್ದ, ಚಿತ್ರೀಕರಣಕ್ಕೆ ಸಿದ್ಧವಾಗಿ ಬಂಡವಾಳ ಹೂಡಿದ್ದ ನಿರ್ಮಾಪಕರು ಮುಂದೇನು ಎಂದು ತಲೆಯ ಮೇಲೆ ಕೈ ಹೊತ್ತಿದ್ದಾರೆ   ಚಿತ್ರಮಂದಿರಗಳ ಮಾಲೀಕರುಗಳಿಗೂ ದಿಕ್ಕು ತೋಚದಂತಾಗಿದೆ
 ಮೇ 3 ರವರೆಗೂ ಇರುವ ಲಾಕ್ ಡೌನ್ ಅಂದಿಗೇ ಕೊನೆಯಾಗುತ್ತದೆ, ವಿಸ್ತರಣೆಯಾಗುವುದಿಲ್ಲ ಎಂದು ಹೇಳಲಾಗದು  ಏಕೆಂದರೆ ಕೊರೋನಾ ವೈರಾಣು ಸೋಂಕಿನ ತೀವ್ರತೆಯನ್ನು ಮುಂದಿನ ನಿರ್ಧಾರ ಅವಲಂಬಿಸಿದೆ  ಹೀಗಿರುವಾಗ ಸಣ್ಣಪುಟ್ಟ ಕಲಾವಿದರು, ತಾಂತ್ರಿಕ ವರ್ಗದವರ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ.  ಚಿತ್ರೋದ್ಯಮವನ್ನು ಉದ್ಯಮವನ್ನಾಗಿ ಪರಿಗಣಿಸಿಲ್ಲ : ಟೇ ಶಿ ವೆಂಕಟೇಶ್  ಲಾಕ್ ಡೌನ್ ವಿಸ್ತರಣೆಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೆ ಚಿತ್ರೋದ್ಯಮಕ್ಕೆ ಉಂಟಾಗಿರುವ ನಷ್ಟ ಕನಿಷ್ಠ ಅಂದಾಜು 200 ಕೋಟಿ ಎಂದಿರುವ ಡೈರೆಕ್ಟರ್ಸ್ ಫಿಲಂ ಬಜಾರ್ ಅಧ್ಯಕ್ಷ ಟೇ ಶಿ ವೆಂಕಟೇಶ್ ,”ಇಡೀ ಚಿತ್ರರಂಗ ಸ್ತಬ್ಧವಾಗಿದ್ದು, ಇದನ್ನೇ ನಂಬಿದ್ದವರ ಆರ್ಥಿಕ ಸ್ಥಿತಿಗತಿ ಡೋಲಾಯಮಾನವಾಗಿದೆ ಚಿತ್ರಮಂದಿರದ ಗೇಟ್ ಕೀಪರ್, ಆಪರೇಟರ್, ನಿರ್ದೇಶಕರು, ನಿರ್ಮಾಪಕರು, ವಿತರಕರು, ಕಲಾವಿದರು ಸೇರಿದಂತೆ ಎಲ್ಲರೂ ಮುಂದೇನು ಎಂದು ತಿಳಿಯದೆ ಆತಂಕದಲ್ಲಿದ್ದಾರೆ  ಬೃಹತ್ ಮಾಧ್ಯಮವಾದ ಚಿತ್ರೋದ್ಯಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೀತಿ ನೀತಿ ರೂಪಿಸಿಲ್ಲ  ಚಿತ್ರರಂಗದವರೂ 75 ವರ್ಷಗಳಾದರೂ ಅದರ ಬಗ್ಗೆ ಗಮನ ಹರಿಸಿಲ್ಲ.  ಹೀಗಾಗಿ ಚಿತ್ರರಂಗ ಪರಿಪೂರ್ಣ ಉದ್ಯಮವಾಗಿ ರೂಪುಗೊಂಡಿಲ್ಲ.  ಯಾರಿಗೂ ಕನಿಷ್ಠ ವೇತನವಿಲ್ಲ  ಎಂದು ಟೇ ಶಿ ವೆಂಕಟೇಶ್ ಪರಿತಪಿಸಿದ್ದಾರೆ
ಕ್ರಿಯಾಶೀಲ ಮನಸ್ಸುಗಳ ಬಗ್ಗೆಯೂ ಗಮನಕೊಡಿ
ಜನರ ಮನಸ್ಸನ್ನು ರಂಜಿಸುವ, ಸಮಾಜದ ಆಗುಹೋಗುಗಳ ಮೇಲೆ ಬೆಳಕು ಚೆಲ್ಲುವ ನಿರ್ದೇಶಕರು, ಬರಹಗಾರರ ಬಗ್ಗೆ ಯಾವುದೇ ಸರ್ಕಾರ ಗಮನ ಹರಿಸಿಲ್ಲ  ಇನ್ನು ಮಾಜಿ ಮುಖ್ಯಮಂತ್ರಿ ಎಚ್‍ ಡಿ ಕುಮಾರಸ್ವಾಮಿ ಹಾಗೂ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರು ಚಿತ್ರರಂಗಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ. ಆದರೆ ಈ ನೆರವು ಕೇವಲ  ಕಾರ್ಮಿಕರ ಒಕ್ಕೂಟ , ಛಾಯಾಗ್ರಾಹಕರ ಸಂಘಕ್ಕೆ ತಲುಪಿತೇ ಹೊರತು ನಿರ್ದೇಶರು, ಸಹ ನಿರ್ದೇಶಕರು, ಬರಹಗಾರರಂತಹ ಕ್ರಿಯಾಶೀಲರ ಬಗ್ಗೆ ಯಾರಿಗೂ ತಿರುಗಿ ನೀಡಿಲ್ಲ ಇನ್ನು ಅನೇಕ ಕಲಾವಿದರೂ ಸಹ ನಿರ್ದೇಶಕರ ಸಂಘದತ್ತ ಕಣ್ಣೆತ್ತಿಯೂ ನೋಡಿಲ್ಲ, ಸಹಾಯ ಬೇಕೇ ಬೇಡವೇ ಕೇಳಿಲ್ಲ ಎಂದು ಟೇ ಶಿ ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ

ಸರ್ಕಾರಕ್ಕೆ ನಿರ್ದೇಶಕರ ಸಂಘದಿಂದ ಪತ್ರ 
ಬಹೃತ್ ಮಾಧ್ಯಮವಾದ ಚಿತ್ರರಂಗದಿಂದ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಪಾವತಿಯಾಗುತ್ತಿರುತ್ತದೆ  ಹೀಗಾಗಿ ಟಿಎ ಡಿಎ ಪಿಎಫ್ ಅಥವಾ ವೇತನವಿಲ್ಲದೆ, ಬದುಕು ಕಟ್ಟಿಕೊಳ್ಳಲು ಹೆಣಗುವ ನಿರ್ದೇಶಕರುಗಳಿಗೆ ಸಹಾಯ ಒದಗಿಸುವಂತೆ ಸಂಘದ ವತಿಯಿಂದ ಪತ್ರ ಬರೆಯಲಾಗಿದೆ  ಎಂದು ಹೇಳಿದ್ದಾರೆ
 
 ಕಲಾವಿದರಿಗೆ ಇನ್ನೆರಡು ದಿನಗಳಲ್ಲಿ ಪರಿಹಾರ : ಸುನಿಲ್ ಪುರಾಣಿಕ್ 
ಕೊರೋನಾ ಕಾರಣದಿಂದಾಗಿ ಹಿರಿತೆರೆ ಹಾಗೂ ಕಿರುತೆರೆಯ ಎಲ್ಲ ಚಟುವಟಿಕೆಗಳು ಸಂಪೂರ್ಣ ನಿಂತಿವೆ   ಈ ಸಂದರ್ಭದಲ್ಲಿ ಕಲಾವಿದರ ಪಾಡು ಶೋಚನೀಯವಾಗಿದೆ  ಈವರೆಗೂ 100 ಕೋಟಿಗೂ ಅಧಿಕ ನಷ್ಟವಾಗಿದೆ  ಆದರೂ ಸೋಂಕು ಹರಡದಂತೆ ಸರ್ಕಾರ ಸೂಚಿಸಿರುವ ಅನುಶಾಸನಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕಿದೆ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದ್ದಾರೆ 
ಸಂಕಷ್ಟದಲ್ಲಿರುವ ಕಾರ್ಮಿಕರು, ಸಹನಟರು, ಬಡ ಕಲಾವಿದರಿಗೆ ಎರಡರಿಂದ ಮೂರು ಹಂತದಲ್ಲಿ ಪಡಿತರ ಮತ್ತಿತರ ಪರಿಹಾರ ನೀಡುವ ಕುರಿತು ಸರ್ಕಾರ ಭರವಸೆ ನೀಡಿದ್ದು, ಇನ್ನೆರಡು ದಿನದಲ್ಲಿ ನಿರ್ಧಾರ ಹೊರಬರಲಿದೆ ಎಂದು ಹೇಳಿದ್ದಾರೆ.
 ಕೊರೋನಾ ವೈರಾಣು ವಿಜೃಂಭಿಸುತ್ತಿರುವ ಕಾರಣ ಕೇವಲ ಚಿತ್ರೋದ್ಯಮ ಮಾತ್ರವಲ್ಲದೆ ದೇಶದ ಎಲ್ಲ ಉದ್ಯಮಗಳ ಉತ್ಪಾದನೆ ಕುಸಿದಿದೆ  ಆರ್ಥಿಕವಾಗಿ ಬಹುತೇಕ ನಷ್ಟ ಸಂಭವಿಸಿದೆ  ಈ ಅನಿಶ್ಚಿತತೆ ಎಲ್ಲಿಯವರೆಗೆ ಎಂಬುದು ಖಚಿತವಾಗಿ ತಿಳಿದಿಲ್ಲ  ಒಂದು ವೇಳೆ ಸೋಂಕು ನಿಯಂತ್ರಣಕ್ಕೆ ಬಂದರೂ ಚೇತರಿಸಿಕೊಳ್ಳಲು ಎಲ್ಲ ಉದ್ಯಮಗಳಿಗೂ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ .