ಕೊರೋನಾ ಹಿನ್ನೆಲೆ: ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಒಂದು ದಿನದ ವೇತನ ನೀಡಬೇಕು - ಹೊರಟ್ಟಿ

ಬೆಂಗಳೂರು, ಮಾ 29,ರಾಜ್ಯದಲ್ಲಿ ಕೊರೋನಾ ವೈರಸ್ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಸ್ಪಂದಿಸಲು ಅನುದಾನಿತ ಶಾಲೆಗಳ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಬೇಕು ಎಂದು ಜೆಡಿಎಸ್ ನ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ. ವಿಶ್ವವ್ಯಾಪಿಯಾಗಿ ತನ್ನ ಕದಂಭ ಬಾಹುಗಳನ್ನು ಕರಾಳವಾಗಿ ಚಾಚಿರುವ ಕೊರೋನಾ ಮಹಾಮಾರಿಯಿಂದ ರಕ್ಷಿಷಿಕೊಳ್ಳಲು ಹಾಗೂ ಸೂಕ್ತ ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಇಡೀ ಮನುಕುಲಕ್ಕೆ ಸವಾಲಾಗಿರುವ ಈ ವೈರಸ್ಸಿನ ವಿರುದ್ಧ ಹೋರಾಟ ನಡೆದಿದ್ದು, ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟು ಕೈ ಜೋಡಿಸಿರುವುದು ಶ್ಲಾಘನೀಯ ಎಂದಿದ್ದಾರೆ.ಅದೇ ರೀತಿ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ಕೊಡುವ ಮೂಲಕ ಸರಕಾರದೊಂದಿಗೆ ಕೈ ಜೋಡಿಸಬೇಕು. ಈ ಮೂಲಕ ಕೊರೋನಾ ಮಹಾಮಾರಿಯಿಂದ ಬಳಲುತ್ತಿರುವವರ ಬಾಳಿಗೆ ಬೆಳಕಾಗಬೇಕೆಂದು ಹೊರಟ್ಟಿ ಕೋರಿದ್ದಾರೆ.