ಅಡೆನ್, ಮೇ 22, ಯೆಮೆನ್ ನಲ್ಲಿ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಮತ್ತೆ 13 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 193 ಕ್ಕೆ ಏರಿಕೆಯಾಗಿದೆ. ಏಪ್ರಿಲ್ 10 ರಂದು ಯೆಮೆನ್ ನಲ್ಲಿ ಮೊದಲ ಬಾರಿ ಕೊರೊನಾ ಸೋಂಕು ಪ್ರಕರಣ ವರದಿಯಾಗಿದ್ದು ಗುರುವಾರದ ವೇಳೆಗೆ ಐವರು ಗುಣಮುಖರಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾರಣಾಂತಿಕ ಶ್ವಾಸಕೋಶದ ಕಾಯಿಲೆಯಿಂದ ನಾಲ್ವರು ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಭಾಗಶಃ ಕರ್ಫ್ಯೂ ವಿಧಿಸುವುದು ಸೇರಿದಂತೆ ಯೆಮೆನ್ ನಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ರಾಜಧಾನಿ ಸನಾದಲ್ಲಿ ಒಟ್ಟು ನಾಲ್ಕು ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾಗಿ ಮೇ 16 ರಂದು ಹೌತಿ ಆರೋಗ್ಯ ಪ್ರಾಧಿಕಾರ ತಿಳಿಸಿತ್ತು.