ಕಾಕಿನಾಡ,
ಮಾರ್ಚ್ 27, ಶಂಕಿತ ಕೊವಿದ್ -19 ಸಾವಿನ ಪ್ರಕರಣವೊಂದರಲ್ಲಿ ಆಟೋ ಚಾಲಕ
ದಂಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ
ರಾಜಮಂಡ್ರಿ ನಗರದ ಎ ವಿ ಅಪ್ಪರಾವ್ ಪೇಟ ಪ್ರದೇಶದಲ್ಲಿ ನಡೆದಿದೆ.ದಂಪತಿ ತಮ್ಮ ಮನೆ ಪಕ್ಕದ ತೋಟವೊಂದರಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆಂಕಿ
ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ
ಮುಟ್ಟಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ದಂಪತಿ ಬೆಂಕಿಗೆ ಆಹುತಿಯಾಗಿದ್ದಾರೆ.
ಸುಟ್ಟು ಕರಕಲಾದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ
ಕಳುಹಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ವ್ಯಕ್ತಿಯನ್ನು ರಾಜಮಂಡ್ರಿಯ
ಆಟೋ ಚಾಲಕ ಸತೀಶ್ (30) ಮತ್ತು ಆತನ ಪತ್ನಿ ವೆಂಕಟಲಕ್ಷ್ಮಿ (26) ಎಂದು
ಗುರುತಿಸಿದ್ದಾರೆ. ಮೃತದೇಹಗಳ ಬಳಿ ಖಾಲಿ ಪೆಟ್ರೋಲ್ ಬಾಟಲ್ ಪತ್ತೆಯಾಗಿದೆ. ವೈದ್ಯಕೀಯ
ಪರೀಕ್ಷಾ ವರದಿಗಳು ಮತ್ತು ವೈದ್ಯರು ಬರೆದುಕೊಟ್ಟಿರುವ ಚೀಟಿಗಳಿದ್ದ ಕೈಚೀಲದಲ್ಲಿ
ದಂಪತಿ ಡೆತ್‍ನೋಟ್ ಬರೆದಿಟ್ಟಿದ್ದಾರೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಸತೀಶ್
ಬಳಲುತ್ತಿದ್ದ ಎಂದು ಆತನ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಆತ್ಮಹತ್ಯೆಗೆ
ಅನಾರೋಗ್ಯ ಮತ್ತು ಹಣಕಾಸು ತೊಂದರೆ ಕಾರಣವಾಗಿರಬಹುದು ಎನ್ನಲಾಗಿದೆ. . ಆದರೆ
ಡೆತ್‍ನೋಟ್‍ನಲ್ಲಿ ದಂಪತಿ ಕೊರೊನಾವೈರಸ್ (ಕೊವಿದ್-19) ಸೋಂಕಿನ ಬಗ್ಗೆ ಭೀತಿ
ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ಇದನ್ನು ಅನುಮಾನಾಸ್ಪದ ಸಂದರ್ಭಗಳಲ್ಲಿ
ಸಂಭವಿಸಿದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.