ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಪಾತ್ರ ಹಿರಿದು: ವಿರೂಪಾಕ್ಷ ಮಾಮನಿ

ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಪಾತ್ರ ಹಿರಿದು: ವಿರೂಪಾಕ್ಷ ಮಾಮನಿ Cooperative societies play a significant role in the economic empowerment of farmers: Virupaksha Mam

          ಸವದತ್ತಿ 08 : ಸಹಕಾರ ಕ್ಷೇತ್ರವು ಗ್ರಾಮೀಣ ಭಾರತದ ಆರ್ಥಿಕ ಬೆನ್ನೆಲುಬಾಗಿದ್ದು, ರೈತರ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅನನ್ಯವಾಗಿದೆ ಎಂದು ವಿರೂಪಾಕ್ಷ ಮಾಮನಿ ಅಭಿಪ್ರಾಯಪಟ್ಟರು.ತಾಲೂಕಿನ ಜಕಬಾಳ ಗ್ರಾಮದ ಶ್ರೀ ಲಕ್ಷ್ಮೀದೇವಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಲ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಸಕಾಲದಲ್ಲಿ ಒದಗಿಸುವ ಮೂಲಕ ಉತ್ತಮ ಕೃಷಿ ಉತ್ಪಾದನೆ,

          ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಸ್ವಾವಲಂಬಿ ಬದುಕನ್ನು ರೂಪಿಸಲು ಇಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.ಇಂತಹ ಸಾಲ ಸೌಲಭ್ಯಗಳು ರೈತರ ಜೀವನಮಟ್ಟ ಸುಧಾರಿಸುವುದಲ್ಲದೆ, ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ ಸಾಲ ಸೌಲಭ್ಯವನ್ನು ವಿತರಿಸಲಾಯಿತು.

          ಪ್ರತಿ ರೈತನು ಆರ್ಥಿಕವಾಗಿ ಸಬಲನಾಗಿ, ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ರಾಜ್ಯ ಮತ್ತು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಲಿ ಎಂದು ಅವರು ಹಾರೈಸಿದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಕಾರ್ಯಕ್ರಮದ ಸಾನ್ನಿಧ್ಯವನ್ನು ಹರ್ಲಾಪೂರ ಢವಳೇಶ್ವರ ಹಿರೇಮಠದ ಶಿವಯೋಗಿ ಶ್ರೀಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಸಿ.ಬಿ. ಕೋರಿ, ಸಂಘದ ಅಧ್ಯಕ್ಷ ಸಂಗಪ್ಪ ಬಸಲಿಗುಂದಿ, ದ್ಯಾಮಪ್ಪ ಬೆನಕಟ್ಟಿ, ಸತ್ಯಪ್ಪ ಹಲಗತ್ತಿ, ಪುಂಡಲೀಕ ಕುರಿ, ಆನಂದ ಗೋಮಾಡಿ, ಯಲ್ಲನಾಯ್ಕ ನಾಯ್ಕರ ಸೇರಿದಂತೆ ಸ್ಥಳೀಯ ಮುಖಂಡರು, ರೈತ ಬಾಂಧವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.