ಬಾಗಲಕೋಟೆ: ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರ ಬದುಕನ್ನು ಮರಳಿ ಕಟ್ಟಿಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಿದ್ದು, ಈ ಕಾರ್ಯದಲ್ಲಿ ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಸಂತ್ರಸ್ತರ ಜೀವನ ರೂಪಿಸುವಲ್ಲಿ ಸಾರ್ವಜನಿಕರೆಲ್ಲರೂ ಸಹ ತಮ್ಮ ತಮ್ಮ ಕೈಲಾದಷ್ಟು ಸೇವಾ ಕಾರ್ಯವನ್ನು ಉದಾರ ಮನಸ್ಸಿನಿಂದ ಮಾಡಬೇಕಾಗಿದ್ದು, ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೇರವಾಗಿ ಹಣವನ್ನು ಜಮೆ ಮಾಡುವಂತೆ ಕೋರಿದರು.
ಪ್ರವಾಹ ಸಂದರ್ಭದಲ್ಲಿ ನಮ್ಮ ಭಾರತೀಯ ಯೋಧರಂತೂ ಜೀವನ ಹಂಗು ತೊರೆದು, ನೆರೆ ಸಂತ್ರಸ್ತರನ್ನು ರಕ್ಷಿಸುವಲ್ಲಿ ಅವರ ಪಾತ್ರ ದೊಡ್ಡದು. ಭಾರತೀಯ ವಾಯು ಸೇನೆ ಯೋಧರು ಪ್ರವಾಹದಲ್ಲಿ ಸಿಲಿಕಿದವರನ್ನು ಸೇನಾ ಹೆಲಿಕ್ಯಾಪ್ಟರ್ ಮೂಲಕ ರಕ್ಷಿಸಿದ್ದಾರೆ ಎಂದರು.
ಪ್ರವಾಹಕ್ಕೆ ಹಾನಿಯಾಗಿರುವ ಆಸ್ತಿ-ಪಾಸ್ತಿ, ಬೆಳೆ ಹಾನಿಗಳ ಸಮೀಕ್ಷೆಯನ್ನು ಕೈಗೊಂಡು ಸೂಕ್ತ ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ.
ಪ್ರವಾಹದ ನಂತರ ಜನರ ಜೀವನವನ್ನು ಮರಳಿ ಕಟ್ಟಿಕೊಡುವ ಕಾರ್ಯವು ಸಹ ಮಹತ್ವದ್ದಾಗಿದ್ದು, ಈ ಪರಿಹಾರ ಕಾರ್ಯದಲ್ಲಿ ಎಲ್ಲರೂ ಸಹ ಪಾಲ್ಗೊಂಡು ಹೃದಯ ಶ್ರೀಮಂತಿಕೆ ಮೆರೆಯಬೇಕು ಎಂದರು.
ಜಿಲ್ಲೆಯ 194 ಗ್ರಾಮಗಳಲ್ಲಿ 31 ಸಾವಿರ ಕುಟುಂಬಗಳ ಪೈಕಿ 1.45 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ, 212 ಪರಿಹಾರ ಕೇಂದ್ರಗಳಲ್ಲಿ ಊಟ ಮತ್ತು ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಪ್ರವಾಹದಿಂದ ಸಂತ್ರಸ್ತರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸ್ ಹಾಗೂ ಹೋಮ್ ಗಾಡ್ರ್ಸ ಸಿಬ್ಬಂದಿಗಳು ಮತ್ತು 100 ಸದಸ್ಯ ಅಗ್ನಿಶಾಮಕ ತಂಡಗಳ ಜೊತೆಗೆ ಜಿಲ್ಲೆಯ ಎಲ್ಲ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ಹಗಲಿರುಳು ತೊಡಗಿದ್ದಾರೆ.
ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಸಂತೋಷ ಒಂದೆಡೆಯಾದರೆ, ಪ್ರವಾಹದ ಹಾನಿಯಿಂದ ಇಡೀ ಜನ-ಜೀವನವೇ ತೊಂದರೆಗೆ ಒಳಪಟ್ಟಿರುವುದು ದುಃಖದ ಸಂಗತಿಯಾಗಿದೆ. ಜಿಲ್ಲೆಯ ಜನರ ಜೀವನವನ್ನು ಪುನಃ ಕಟ್ಟಿಕೊಡುವ ಸವಾಲು ನಮ್ಮ-ನಿಮ್ಮೇಲ್ಲರ ಮೇಲಿದ್ದು, ಜನರ ಬದುಕಿನಲ್ಲಿ ಸಂತೋಷ, ನೆಮ್ಮದಿ ಮರಳಿ ತರಲು ಎಲ್ಲರೂ ಶ್ರಮಿಸೋಣ ಎಂದು ತ್ರಿವರ್ಣ ಧ್ವಜದ ಅಡಿಯಲ್ಲಿ ನಿಂದು ನಾವೆಲ್ಲರೂ ಒಂದು ದೃಡ ಸಂಕಲ್ಪ ಮಾಡೋಣ, ಪ್ರವಾಹದಿಂದ ನೊಂದವರ ಜೊತೆಗೆ ನಿಂತು, ಅವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೀರಣ್ಣ ಚರಂತಿಮಠ ವಹಿಸಿದ್ದರು. ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಪ್ರೋಭೇಷನರಿ ಐ.ಎ.ಎಸ್ ಅಧಿಕಾರಿಗಳಾದ ಗರಿಮಾ ಪವ್ವಾರ, ಗಿರೀಶ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ, ಉಪವಿಭಾಗಾಧಿಕಾರಿ ಎಚ್.ಜಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.