ಬರೋಡಾ ಬ್ಯಾಂಕಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಲೋಕದರ್ಶನವರದಿ

ರಾಣೇಬೆನ್ನೂರು28: ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ರಾಣೇಬೆನ್ನೂರ ಶಾಖೆಯ ಬ್ಯಾಂಕ್ ಆಫ್ ಬರೋಡಾ ವತಿಯಿಂದ ನೀಡಿದ್ದು, ಅದನ್ನು ಸಮರ್ಪಕವಾಗಿ ಉಪಯೋಗಿಸಿ ಉತ್ತಮ ಆರೋಗ್ಯದ ಜೊತೆಗೆ ಸದೃಢರಾಗಿ ಅಭ್ಯಾಸದತ್ತ ಹೆಚ್ಚಿನ ಒಲವು ತೋರಬೇಕೆಂದು ಬ್ಯಾಂಕ್ನ ವ್ಯವಸ್ಥಾಪಕ ಮನೋಜಕುಮಾರ ಹೇಳಿದರು.

         ತಾಲೂಕಿನ ಬಿಲ್ಲಹಳ್ಳಿಯ ಶ್ರೀ ಮಾತಾರವಿಂದ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು. ಶುದ್ಧ ನೀರಿನಿಂದ ಹಲವಾರು ಖಾಯಿಲೆಗಳನ್ನು ದೂರಮಾಡಬಹುದು.

        ಹೆಚ್ಚಾಗಿ ನೀರು ಸೇವಿಸುವ ಗುಣಗಳನ್ನು ಸರ್ವರೂ ರೂಢಿಸಿಕೊಳ್ಳಬೇಕು ಅಂದಾಗ ಆರೋಗ್ಯಯುತವಾದ ಬೆಳವಣಿಗೆಯಾಗುತ್ತದೆ ಎಂದರು. 

  ಇದೇ ಸಂದರ್ಭದಲ್ಲಿ ಪಾಲಕರ ಸಭೆಯನ್ನು ಏರ್ಪಡಿಸಲಾಗಿತ್ತು. ಅಧ್ಯಕ್ಷತೆವಹಿಸಿದ್ದ ಕೆ.ಬಿ.ಪೊಲೀಸ್ಗೌಡ್ರ ಮಾತನಾಡಿ, ಬ್ಯಾಂಕ್ ಬರೋಡದವರು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಇಂತಹ ವ್ಯವಸ್ಥೆಯನ್ನು ಕೈಗೊಂಡಿರುವ ಬ್ಯಾಂಕ್ ಬರೋಡದ ಕಾರ್ಯ ನಿಜಕ್ಕೂ ಶ್ಲ್ಯಾಘನೀಯವಾದದ್ದು ಎಂದರು.

  ಪರೀಕ್ಷೆಯ ಅವಧಿ ಸಮೀಪಿಸುತ್ತಿದೆ. ಮಕ್ಕಳ ಬಗ್ಗೆ ಪಾಲಕರು ವಿಶೇಷ ಕಾಳಜಿಯನ್ನು ವಹಿಸಬೇಕು. ಮೋಬೈಲ್, ಟೀವಿ ಯಿಂದ ದೂರವಿಟ್ಟು, ಅಭ್ಯಾಸದತ್ತ ಹೆಚ್ಚಿನ ನಿಗಾ ಇಡುವಂತೆ ಪಾಲಕರು ಮತ್ತು ಪೋಷಕರು ಪ್ರೇರೇಪಿಸಬೇಕು.

 ಶಿಕ್ಷಕರು ಮತ್ತು ಪಾಲಕರು ಸಹಕರಿಸಿ ಮಕ್ಕಳ ಬಗ್ಗೆ ಹೆಚ್ಚಿನ ಅಭ್ಯಾಸದ ಒಲವು ತೋರಿಸಿದಾಗ ಮಕ್ಕಳು ಮೌಲ್ಯಯುತವಾದ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

         ಮುಖ್ಯೋಪಾಧ್ಯಾಯ ಎನ್.ಎಸ್.ಗಡಾದ, ಬ್ಯಾಂಕ್ನ ಸೀನಿಯರ್ ಮ್ಯಾನೇಜರ್ ಕುಮಾರ ನಾಯ್ಕ, ದಿನೇಶಯ್ಯ ಬೂದಿಹಾಳಮಠ, ಶಿಕ್ಷಕರಾದ ಸಿ.ಎಚ್.ಅಸುಂಡಿ, ವಿ.ಎಸ್.ಸೋಮಕ್ಕಳವರ, ಸಿ.ಬಿ.ಪೋಲೀಸ್ಗೌಡ್ರ, ಕೆ.ಆರ್.ಕುಸಗೂರ ಸೇರಿದಂತೆ ಪಾಲಕರು ಮತ್ತು ಪೋಷಕರು ಹಾಗೂ ಸಿಬ್ಬಂಧಿವರ್ಗದವರು ಆಡಳಿತ ಮಂಡಳಿಯ ಸದಸ್ಯರು ಇದ್ದರು.