ಜೂನ್ 15 ರಿಂದ ಕಲಘಟಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರ ನೀರು ಯೋಜನೆ ಅನುಷ್ಠಾನ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್
Continuous water project implementation in Kalghatagi Town Panchayat from June 15: District In-charg
ಲೋಕದರ್ಶನ ವರದಿ
ಧಾರವಾಡ 12: ಕಲಘಟಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ 17 ವಾರ್ಡ್ಗಳಿಗೆ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ನಿರಂತರ ನೀರು ಯೋಜನೆಯು ಬರುವ ಜೂನ್ 15 ರಿಂದ ಆರಂಭವಾಗಲಿದೆ ಎಂದು ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು. ಅವರು ಇಂದು (ಮೇ.12) ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಬೇಸಿಗೆ ಕಾಲದ ಕುಡಿಯುವ ನೀರು, ಜಾನುವಾರು ಮೇವು ಹಾಗೂ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ಕೈಗೊಂಡಿರುವ ಕುರಿತು ಪರೀಶೀಲಿಸಿ ಮಾತನಾಡಿದರು.
ಕಲಘಟಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 17 ವಾರ್ಡ್ಗಳಿದ್ದು, 19 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಪ್ರತಿದಿನಕ್ಕೆ 3 ಎಮ್ಎಲ್ಡಿ ನೀರು ಸರಬರಾಜು ಮಾಡಲಾಗುತ್ತಿದೆ. 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ನಿರಂತರ ನೀರು ಯೋಜನೆಯ ಕಾಮಗಾರಿಯು ಮೇ 18, 2024 ರಂದು ಆರಂಭವಾಗಿದ್ದು, ಏಪ್ರೀಲ್ 24, 2026 ಕ್ಕೆ ಮುಕ್ತಾಯವಾಗುವ ಒಪ್ಪಂದವಾಗಿತ್ತು. ಗುತ್ತಿಗೆದಾರ ವಿಸ್ತರಣಾ ಅವಧಿ ಪಡೆದು, ಪ್ರಸ್ತಕ ತಿಂಗಳು ಕಾಮಗಾರಿ ಮುಕ್ತಾಯಗೊಳ್ಳುತ್ತಿದೆ. ರೂ. 35.38 ಕೋಟಿ ಮೊತ್ತದ ಈ 24ಘಿ7 ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಜೂನ್ 15, 2026 ರಿಂದ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಉಳಿದಂತೆ ಅಣ್ಣಿಗೇರಿ, ನವಲಗುಂದ, ಕುಂದಗೋಳ ಪಟ್ಟಣಗಳಲ್ಲಿಯೂ ಆದಷ್ಟು ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಲ್ಲಿನ ಪಟ್ಟಣವಾಸಿಗಳಿಗೆ ದಿನದ 24 ಗಂಟೆ ನಿರಂತರ ಕುಡಿಯುವ ನೀರು ಲಭಿಸುವಂತೆ ಕ್ರಮವಹಿಸಬೇಕು. ಮತ್ತು ಅಧಿಕಾರಿಗಳು ಸಲ್ಲಿಸಿರುವ ಮಾಹಿತಿ ಅನುಸಾರ ಜಿಲ್ಲೆಯ ಎಲ್ಲ ಪಟ್ಟಣಗಳ ಬಹುತೇಕ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೆಲವು ಕಡೆ ತಾಂತ್ರಿಕ ಕಾರಣಗಳಿದ್ದು, ಅವುಗಳನ್ನು ಪರಿಹರಿಸಿ ಸುಗಮವಾಗಿ ಮತ್ತು ಸಮರ್ಕವಾಗಿ ನೀರು ಸರಬರಾಜು ಮಾಡುವಂತೆ ಸಚಿವ ಸಂತೋಷ ಲಾಡ್ ಅವರು ಸೂಚಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೊಂಡಿದೆ. ಇಂತಹ ಬೇಸಿಗೆ ಸಮಯದಲ್ಲಿಯೂ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ 4 ರಿಂದ 5 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ಹಿಂದೆ 8, 10, 15 ದಿನಗಳಿಗೆ ಇದ್ದ ಸರಬರಾಜು ವ್ಯವಸ್ಥೆ ಈಗ 4 ದಿನಕ್ಕೆ ಬಂದಿದೆ. ಆದಷ್ಟು ಶೀಘ್ರವಾಗಿ ಅವಳಿ ನಗರದಲ್ಲಿ ನಿರಂತರ ನೀರು ಯೋಜನೆ ಆರಂಭವಾಗಲಿದೆ. ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಅವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಶ್ಲಾಘಿಸಿದರು.
ರೈತರಿಗೆ ಅನಾನೂಕುಲವಾಗದಂತೆ ಸಮಗ್ರವಾಗಿ ಪರೀಶೀಲಿಸಿ, ರೈತರ ಹಿತದೃಷ್ಠಿಯಿಂದ 7ಎ ಪ್ರಕರಣಗಳನ್ನು ಪರಿಹರಿಸಬೇಕು. ದಾಖಲಾತಿಗಳ ನೂನ್ಯತೆ ಹಾಗೂ ಕೊರತೆ ಕಂಡಲ್ಲಿ ನಿಯಮಾನುಸಾರ ರೈತರಿಗೆ ಅವಕಾಶ ನೀಡಿ, ಪರೀಶೀಲಿಸಬೇಕು. ಸರ್ಕಾರವು ರೈತ ಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ರೈತ ಸ್ನೇಹಿ ನೀತಿಯನ್ನು ಅನುಸರಿಸುತ್ತಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ನಿರ್ದೇಶಿಸಿದರು.
ಮುಂಗಾರು ಹಂಗಾಮು ಆಗಮಿಸುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೈತರಿಗೆ ಅಗತ್ಯವಿರುವಷ್ಟು ಬೀಜ, ರಾಸಾಯನಿಕ ಗೊಬ್ಬರಗಳನ್ನು ದಾಸ್ತಾನುಗೊಳಿಸಿ, ವಿತರಿಸಬೇಕು. ರೈತರಿಗೆ ತೊಂದರೆಯಾಗದಂತೆ ಸಕಾಲಕ್ಕೆ ರೈತ ಸಂಪರ್ಕ ಕೇಂದ್ರ ಹಾಗೂ ಸಹಕಾರಿ ಸಂಘಗಳ ಮೂಲಕ ಬೀಜ, ಗೊಬ್ಬರಗಳನ್ನು ನೀಡಬೇಕು. ಸರ್ಕಾರವು ಈಗಾಗಲೇ ಕೃಷಿ ಇಲಾಖೆಯ ಎಲ್ಲ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತರು ಎಫ್ಐಡಿ ಸಂಖ್ಯೆಯನ್ನು ಹೊಂದುವದನ್ನು ಕಡ್ಡಾಯಗೊಳಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 77 ಕ್ಕಿಂತ ಹೆಚ್ಚು ಜನ ರೈತರು ಎಫ್ಐಡಿ ಸಂಖ್ಯೆಯನ್ನು ಸೃಜಿಸಿಕೊಂಡು ಹೊಂದಿದ್ದಾರೆ. ಉಳಿದಿರುವ ರೈತರ ಮನೆ ಬಾಗಲಿಗೆ ತೆರಳಿ ಅವರು ಸಹ ಎಫ್ಐಡಿ ಸಂಖ್ಯೆಯನ್ನು ಹೊಂದುವಂತೆ ಕೃಷಿ, ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಸಚಿವರು ಹೇಳಿದರು.
ಅವಳಿ ನಗರದ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳ ಉನ್ನತೀಕರಣಕ್ಕೆ ರಾಜ್ಯ ಸರ್ಕಾರವು ಆಧ್ಯತೆ ನೀಡಿದೆ. ವಿವಿಧ ಕಾರ್ಯಗಳಿಗಾಗಿ ಭೂಸ್ವಾಧೀನ ಕಾರ್ಯವು ಪ್ರಗತಿಯಲ್ಲಿದೆ. ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪರಿಹಾರ ಧನ ವಿತರಣೆ ಕಾರ್ಯವು ಪ್ರಗತಿಯಲ್ಲಿದ್ದು, ರಾಜ್ಯ ಸರ್ಕಾರವು ರೈಲು ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪಡಿಸಿಕೊಳ್ಳುವ ಕಾರ್ಯವನ್ನು ಆಧ್ಯತೆ ಮೇಲೆ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.
16 ಗ್ರಾಮ 18 ಖಾಸಗಿ ಕೊಳವೆಬಾವಿ: ಜಿಲ್ಲೆಯಲ್ಲಿ ಇಲ್ಲಿಯವರಗೆ ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ, ಮುಗದ, ಮನಗುಂಡಿ, ಲೋಕೂರು ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ, ಅದರಗುಂಚಿ, ಕುರ್ಡಿಕೆರೆ, ಛಬ್ಬಿ ಹಾಗೂ ಕಲಘಟಗಿ ತಾಲೂಕಿನ ನೆಲ್ಲಹರವಿ ತಾಂಡ, ಬಿ.ಹುಲಿಕಟ್ಟಿ, ದ್ಯಾಮನಕೊಂಡ, ಮುಕ್ಕಲ, ಹಿರೇ ಹುನಸಿಕಟ್ಟಿ, ಕುಡಲಗಿ ಗ್ರಾಮಗಳು ಸೇರಿದಂತೆ ಒಟ್ಟು 16 ಗ್ರಾಮಗಳಿಗೆ ಪ್ರಸ್ತುತ ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಮೇವು ದಾಸ್ತಾನು: ಧಾರವಾಡ ಜಿಲ್ಲೆಯಲ್ಲಿ 2,35,059 ದನ ಮತ್ತು ಎಮ್ಮೆಗಳಿದ್ದು, 1,49,220 ಕುರಿ ಮತ್ತು ಮೇಕೆಗಳಿವೆ. ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ವಾರ 5,06,588.81 ಮೆ.ಟನ್ ಮೇವು ಉಳಿಕೆ ಇದೆ. ಅದು ಮುಂದಿನ 49 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಧಾರವಾಡ ತಾಲೂಕಿನಲ್ಲಿ 73,780 ದನ ಮತ್ತು ಎಮ್ಮೆಗಳಿದ್ದು, 27,724 ಕುರಿ ಮತ್ತು ಮೇಕೆಗಳಿದ್ದು, 1,30,595.96 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 41 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಅಳ್ನಾವರ ತಾಲೂಕಿನಲ್ಲಿ 4,287 ದನ ಮತ್ತು ಎಮ್ಮೆಗಳಿದ್ದು, 1,226 ಕುರಿ ಮತ್ತು ಮೇಕೆಗಳಿದ್ದು, 4,932.59 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 27 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಹುಬ್ಬಳ್ಳಿ ನಗರದಲ್ಲಿ 21,366 ದನ ಮತ್ತು ಎಮ್ಮೆಗಳಿದ್ದು, 8,328 ಕುರಿ ಮತ್ತು ಮೇಕೆಗಳಿದ್ದು, 24427.58 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 26 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ 21,800 ದನ ಮತ್ತು ಎಮ್ಮೆಗಳಿದ್ದು, 16,650 ಕುರಿ ಮತ್ತು ಮೇಕೆಗಳಿದ್ದು, 61725 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 63 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಕಲಘಟಗಿ ತಾಲೂಕಿನಲ್ಲಿ 50,637 ದನ ಮತ್ತು ಎಮ್ಮೆಗಳಿದ್ದು, 11,300 ಕುರಿ ಮತ್ತು ಮೇಕೆಗಳಿದ್ದು, 8111.9 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 38 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಕುಂದಗೋಳ ತಾಲೂಕಿನಲ್ಲಿ 28,163 ದನ ಮತ್ತು ಎಮ್ಮೆಗಳಿದ್ದು, 22,656 ಕುರಿ ಮತ್ತು ಮೇಕೆಗಳಿದ್ದು, 67011 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 53 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ನವಲಗುಂದ ತಾಲೂಕಿನಲ್ಲಿ 23,385 ದನ ಮತ್ತು ಎಮ್ಮೆಗಳಿದ್ದು, 43,535 ಕುರಿ ಮತ್ತು ಮೇಕೆಗಳಿದ್ದು, 95629.02 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 86 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಅಣ್ಣಿಗೇರಿ ತಾಲೂಕಿನಲ್ಲಿ 11,641 ದನ ಮತ್ತು ಎಮ್ಮೆಗಳಿದ್ದು, 17,801 ಕುರಿ ಮತ್ತು ಮೇಕೆಗಳಿದ್ದು, 41148.66 ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 83 ವಾರಗಳಷ್ಟು ಮೇವು ದಾಸ್ತಾನು ಲಭ್ಯವಿದೆ.
ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ 2,35,059 ದನ ಮತ್ತು ಎಮ್ಮೆಗಳಿದ್ದು, 1,49,220 ಕುರಿ ಮತ್ತು ಮೇಕೆಗಳಿವೆ. ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ವಾರ 5,06,588.81 ಮೆ.ಟನ್ ಮೇವು ಉಳಿಕೆ ಇದೆ. ಅದು ಮುಂದಿನ 49 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಲಭ್ಯವಿದೆ ಎಂದು ಅವರು ತಿಳಿಸಿದರು.
ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ವಿವರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಏಡಿಸಿ ಗೀತಾ ಸಿ.ಡಿ. ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲೂಕುಗಳ ತಹಸೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಕೆಯುಐಡಿಎಫ್ಸಿ, ಎಲ್ ಆ್ಯಂಡ್ ಟಿ ಕಂಪನಿಯ ಪ್ರತಿನಿಧಿಗಳ ಮತ್ತು ಇತರರು ಭಾಗವಹಿಸಿದ್ದರು.
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ 