ಕಾರವಾರದಲ್ಲಿ ಮುಂದುವರಿದ ಕಡಲ್ಕೊರೆತ ಮಳೆ ಅಬ್ಬರ ಕಡಿಮೆಯಾದರೂ ಕಡಲ ಅಬ್ಬರ ನಿಂತಿಲ್ಲ


ಕಾರವಾರ  :  ಬುಧುವಾರ ಮಳೆ ಸ್ವಲ್ಪ ಇಳಿಮುಖವಾದರೂ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸಮುದ್ರದ ಅಲೆಗಳ ಅಬ್ಬರ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಡಲತೀರದ ಅಂಚಿಗೆ ಇರುವ ಶಿಲ್ಪವನದ ಬಳಿ ಕಡಲ್ಕೊರೆತ ಇಮ್ಮಡಿಸಿದೆ. ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಕಡಲ ಅಬ್ಬರ ನಿಂತಿಲ್ಲ. 

ಬಂದರು ಹೂಳನ್ನು ದಶಕಗಳ ನಂತರ ತೆಗೆದಿದ್ದು, ಕಡಲ್ಕೊರೆತಕ್ಕೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಹವಮಾನ ಇಲಾಖೆ ಗಾಳಿಯ ಬೀಸುವಿಕೆ ಮತ್ತು ಆಳ ಸಮುದ್ರದಲ್ಲಿನ ತಳ ಭಾಗದ ಬದಲಾವಣೆಗಳು ಸಮುದ್ರದ ಅಲೆಗಳ ಅಬ್ಬರಕ್ಕೆ ಕಾರಣ ಎನ್ನುತ್ತಿವೆ. ಕಡಲ್ಕೊರೆತ ಎಂಬುದು ಸಮುದ್ರದ ಸಹಜ ಪ್ರಕ್ರಿಯೆ. ಇದು ಪ್ರತಿ ವರ್ಷಕ್ಕೂ ಭಿನ್ನ ಸ್ವರೂಪದಲ್ಲಿರುತ್ತದೆ. 

ಹಾಗಾಗಿ ಸಮುದ್ರದ ಅಂಚಿಗೆ ಯಾವುದೇ ಶಾಶ್ವತ ಕಟ್ಟಡಗಳನ್ನು ಕಟ್ಟಬಾರದು. ಈ ಕಾರಣಕ್ಕಾಗಿಯೇ ಸಿಆರ್ಝೆಡ್ ನಿಯಮಗಳು ರೂಪಿಸಿದ್ದು ಎಂಬುದು ಕಡಲ ವಿಜ್ಞಾನಿಗಳ ಅಭಿಮತ. ಕಡಲಿನ ರೌದ್ರ ಸ್ವರೂಪ ಹೆಚ್ಚುತ್ತಿದ್ದು, ದಡದ ಮೀನುಗಾರಿಕೆ ಕಾಣುವುದೇ ಅಪರೂಪವಾಗಿದೆ. 

ಈ ವರ್ಷವಂತೂ ದೊಡ್ಡ ಪ್ರಮಾಣದ ರಂಪಣಿ ಮೀನುಗಾರಿಕೆ ಆರಂಭವೇ ಆಗಿಲ್ಲ. ಸಂಪ್ರದಾಯಿಕ ಮೀನುಗಾರಿಕೆಯ ಪದ್ಧತಿಗಳಿಗೆ ಸಮುದ್ರದ ಅಲೆಗಳು ಪೂರಕವಾಗಿಲ್ಲ. ಹಾಗಾಗಿ ಪಾತಿ ದೋಣಿಯಲ್ಲಿ ಮೀನು ಹಿಡಿಯುವವರು ಸಹ ಕಡಲಿಗೆ ಇಳಿಯುವ ಸಾಹಸ ಮಾಡಿಲ್ಲ. ಮೀನುಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತ ಮೀನುಗಾರಿಕೆಯನ್ನು ಮಳೆಗಾಲದಲ್ಲಿ ನಿಷೇಧಿಸಿದ್ದು ಯಾವುದೇ ಮೀನುಗಾರರು ಕಡಲಿಗೆ 

ಇಳಿದಿಲ್ಲ.