ಮಂಗಳೂರು,
ಡಿ. 21 ಪೌರತ್ವ ಕಾಯಿದೆ ವಿರೋಧಿಸಿ ಹಿಂಸಾಚಾರ ನಡೆದ ನಂತರ ಮಂಗಳೂರು ನಗರದಾದ್ಯಂತ ಶನಿವಾರವು ಕರ್ಫ್ಯೂ
ಜಾರಿ ಮುಂದುವರೆದಿದೆ. ಈ ಮಧ್ಯೆ ಇಂದು ಮಂಗಳೂರಿಗೆ ಭೇಟಿ ನೀಡಲು ಉದ್ದೇಶಿಸಿದ್ದ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯ ಅವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ನೋಟಿಸ್ ನೀಡಿ, ಈಗ ನಗರಕ್ಕೆ ಆಗಮಿಸದಂತೆ ಸೂಚಿಸಿದ್ದಾರೆ.ತಮ್ಮ ಭೇಟಿಯಿಂದ ಕಾನೂನು
ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.ನಗರದಲ್ಲಿ ಯಾವುದೇ
ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ
ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಂದು ಬೆಳಗ್ಗೆ 6ರಿಂದ 8 ಗಂಟೆಯವರೆಗೆ ನಗರದಲ್ಲಿ ಕರ್ಫ್ಯೂ ಸಡಿಲಿಕೆ
ಮಾಡಿ ಜನರಿಗೆ ದಿನ ಬಳಕೆಯ ವಸ್ತುಗಳನ್ನು ಖರೀದಿಸಲು
ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈ ವಿಷಯವನ್ನು 7 ಗಂಟೆ ಸುಮಾರಿಗೆ ತಿಳಿಸಿದ್ದರಿಂದ
ಸಾರ್ವಜನಿಕರು ಲಗುಬಗೆಯಲ್ಲಿ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡುಬಂತು. ಆದರೆ
ಈ ವೇಳೆ 8 ಗಂಟೆ ಮೀರಿದ್ದರಿಂದ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿ ಅಲ್ಲಿಂದ ಗ್ರಾಹಕರನ್ನು ಲಘು ಲಾಠಿ
ಪ್ರಹಾರ ನಡೆಸಿ ಚದುರಿಸುತ್ತಿದ್ದ ದೃಶ್ಯ ಕಂಡುಬಂತು.ನಗರದಲ್ಲಿ ಯಾವುದೇ ಬಸ್ಸು ಸೇರಿದಂತೆ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ.
ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು,
ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಅಲ್ಲದೇ, ಜಿಲ್ಲೆಯಾದ್ಯಂತ ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ. ಪೊಲೀಸರ
ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ
ಬಿಎಸ್ ಯಡಿಯೂರಪ್ಪ ಇಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿಗೆ
ಭೇಟಿ ನೀಡಲಿದ್ದು, ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅವರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ,
ಸಂಸದೆ ಶೋಭಾ ಕರಂದ್ಲಾಜೆ ಕೂಡ ಮಂಗಳೂರಿಗೆ ತೆರಳಿದ್ದಾರೆ.ಪೊಲೀಸ್ ಅಧಿಕಾರಿಗಳು ಮತ್ತು ಶಾಸಕರು, ಸಂಸದರ ಜೊತೆ ಸಭೆ ನಡೆಸಲಿದ್ದಾರೆ.
ಅಲ್ಲದೇ ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟಿರುವ
ನೌಶಿನ್ ಹಾಗೂ ಜಲೀಲ್ ಕುಟುಂಬಕ್ಕೆ ಪರಿಹಾರ ಘೋಷಿಸುವ
ಸಾಧ್ಯತೆ ಇದೆ.