ಜ.ಕಾಶ್ಮೀರದಲ್ಲಿ ಮುಂದುವರಿದ ಆತಂಕ: ಜಮ್ಮುವಿನಲ್ಲಿ ನಿಷೇಧಾಜ್ಞೆ; ಶಾಲಾ-ಕಾಲೇಜು ಬಂದ್

 ಜಮ್ಮು, ಆ 5  ಕಾಶ್ಮೀರ ಕಣಿವೆಯಲ್ಲಿ ಸೇನಾ ನಿಯೋಜನೆ ಮತ್ತು ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು ಮತ್ತು ಕಾಶ್ಮೀರ ಆಡಳಿತವು, ಜಮ್ಮು ಪ್ರದೇಶದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಮಾತ್ರವಲ್ಲ ಜಮ್ಮು ಜಿಲ್ಲೆಯಲ್ಲಿ ಸೆಕ್ಷನ್ 144 ನಡಿ ನಿಷೇಧಾಜ್ಞೆ  ಜಾರಿಗೊಳಿಸಲಾಗಿದ್ದು, ವಿವಿಧ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಮುಂದಿನ ಆದೇಶದವರೆಗೆ ಮುಂಜಾಗೃತಾ ಕ್ರಮವಾಗಿ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ನಾಳೆ ಆಗಸ್ಟ್ 5ರಂದು ಮುಚ್ಚಲ್ಪಡುತ್ತವೆ ಎಂದು ಜಮ್ಮು, ಕಥುವಾ, ಸಾಂಬಾ, ಪೂಂಚ್, ದೋಡಾ, ರಾಜೌರಿ, ಉಧಂಪುರ್ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇವುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಮುಂದಿನ ಆದೇಶದವರೆಗೆ ಜಮ್ಮು ಜಿಲ್ಲೆಯಲ್ಲಿ 144 ಸೆಕ್ಷನ್ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಷ್ಮಾ ಚೌಹಾಣ್ ತಿಳಿಸಿದ್ದಾರೆ. ಜಮ್ಮು ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಿಆರ್ಪಿಎಫ್ನ 40 ತುಕಡಿಗಳನ್ನು ಸಹ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ  ಆದೇಶದ ಪ್ರಕಾರ, ಜಮ್ಮುವಿನಲ್ಲಿ 6, ಸಾಂಬಾ ಎರಡು, ಕಥುವಾ ಎರಡು, ಉಧಂಪುರ ನಾಲ್ಕು, ರಿಯಾಸಿ ಒಂದು, ರಜೌರಿಯಲ್ಲಿ ಎಂಟು, ಪೂಂಚ್ ಆರು ಮತ್ತು ದೋಡಾದಲ್ಲಿ ಸಿಆರ್ಪಿಎಫ್ನ 11 ಕಂಪನಿಗಳನ್ನು ನಿಯೋಜಿಸಲಾಗಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮಾತ್ರವಲ್ಲ, ವಿವಿಧ ಶಾಲೆಗಳು ಮತ್ತು ಜಮ್ಮು ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. 35,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಮತ್ತು ಎಲ್ಲಾ ಅಮರನಾಥ ಯಾತ್ರಾರ್ಥಿಗಳು ತಮ್ಮ ಕಣಿವೆಯ ಪ್ರವಾಸವನ್ನು ಮೊಟಕುಗೊಳಿಸುವಂತೆ ಆದೇಶಿಸಿರುವುದು,  ಇದರ ಜೊತೆಗೆ ಎಲ್ಲಾ ಸ್ಥಳೀಯೇತರ ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗಿಗಳು, ಕಾರ್ಮಿಕರು ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ನಿರ್ದೇಶಿಸಿರುವುದರಿಂದ ದೇಶದ ಜನರಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.   ಕಿಶ್ತವಾರ್ ನ ಮಚೈಲ್ ಮಾತಾ, ಪೂಂಚ್ನ ಬುದ್ಧ ಅಮರನಾಥ್ ಮತ್ತು ರಾಸಿಯದ ಕೌಸರ್ ನಾಗ್ ಸೇರಿದಂತೆ ಮೂರು ಪ್ರಮುಖ ತೀರ್ಥಯಾತ್ರೆಗಳನ್ನು ರದ್ದುಪಡಿಸಲಾಗಿದೆ. ಎನ್ಐಟಿ ಶ್ರೀನಗರದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಮ್ಮು ತಲುಪಿದ್ದು, ಭಾನುವಾರ ರೈಲುಗಳ ಮೂಲಕ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ.