ಬೆಂಗಳೂರು, ನ 8: ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ವೈದ್ಯರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ಇಂದು ರಾಜ್ಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗ (ಒಪಿಡಿ) ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತರ ಮನವೊಲಿಕೆಗೆ ಉಪಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಡೆಸುತ್ತಿರುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಈ ನಡುವೆ, ವೈದ್ಯರ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರು ಶರಣಾಗುವುದಾಗಿ ಘೋಷಿಸಿದ್ದಾರೆ. ಆದರೂ, ವೈದ್ಯರು ಮುಷ್ಕರ ಕೈಬಿಡಲು ಮುಂದಾಗುತ್ತಿಲ್ಲ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕಾರ್ಯದರ್ಶಿ ಶ್ರೀನಿವಾಸ್, ಕರವೇ ಕಾರ್ಯಕರ್ತರ ಶರಣಾಗತಿ ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಇದರಿಂದ ನಾವು ಮುಷ್ಕರ ಕೈಬಿಡುವುದಿಲ್ಲ. ಅವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವರೆಗೆ ಮತ್ತು ವೈದ್ಯರಿಗೆ ರಕ್ಷಣೆ ನೀಡಲು ಸೂಕ್ತ ನೀತಿ ರೂಪಿಸುವರೆಗೆ ಹೋರಾಟ ಮುಂದುವರಿಸಲಾಗುವುದು. ಬೆಳಗ್ಗೆ 11ಕ್ಕೆ ಈ ಸಂಬಂಧ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಐಎಂಎ ರಾಜ್ಯ ಘಟಕದಿಂದ ಬಂದ್ ಗೆ ಕರೆ ನೀಡಿದ್ದು, 23 ಸಾವಿರ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತಗೊಂಡಿದೆ. ಬೆಂಗಳೂರಿನ 5000 ಖಾಸಗಿ ಆಸ್ಪತ್ರೆಗಳ ಒಪಿಡಿ ಕೂಡ ಸ್ಥಗಿತೊಂಡಿವೆ. ಈ ನಡುವೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ವೈದ್ಯರು, ಸಿಬ್ಬಂದಿ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.