2 ಮತ್ತು 4ನೇ ಶನಿವಾರ ರಜೆ ಪಡೆಯದ ನೌಕರರಿಗೆ ಹಿಂದಿನಂತೆ ರಜೆ ಮುಂದುವರಿಕೆ

ಬಿ.ಎಸ್. ಯಡಿಯೂರಪ್ಪ

ಬೆಂಗಳೂರು, ನ.30 - ರಾಜ್ಯ ಸರ್ಕಾರದ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಲ್ಲಿ ಪ್ರತಿ ತಿಂಗಳು 2 ಮತ್ತು 4 ನೇ ಶನಿವಾರ ರಜೆ ಪಡೆಯದ ನೌಕರರಿಗೆ ಈ ಹಿಂದೆ ಇದ್ದಂತೆ‌ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಗಳನ್ನು ಮುಂದುವರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. 

ರಾಜ್ಯ ಸರ್ಕಾರಿ ನೌಕರರಿಗೆ ಹಲವಾರು ವರ್ಷಗಳಿಂದ ತಿಂಗಳ 2ನೇ ಶನಿವಾರ ರಜೆ ನೀಡಲಾಗುತ್ತಿದ್ದು, ಜೂನ್ ತಿಂಗಳ ಆದೇಶದಲ್ಲಿ ಪ್ರತಿ ತಿಂಗಳ 2ನೇ ಹಾಗೂ ನಾಲ್ಕನೇ ಶನಿವಾರ ರಜೆ ಮುಂದುವರಿಸಲು ಸರ್ಕಾರ ಆದೇಶಿಸಿತ್ತು.

ಇದರಿಂದಾಗಿ ಪ್ರಸ್ತುತ ರಜಾ ಸೌಲಭ್ಯಗಳನ್ನು ಪಡೆಯದ ಕೆಲ ಇಲಾಖೆಯ ನೌಕರರಿಗೆ ಸಾಂದರ್ಭಿಕ ರಜೆಗಳು 15 ರಿಂದ  ಕಡಿತಗೊಳಿಸಿ 10ಕ್ಕೆ ಮಿತಿಗೊಳಿಸಲಾಗಿತ್ತು. ಇದರಿಂದ ರಜೆ ಪಡೆಯದ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕಾರ್ಮಿಕರಿಗೆ ಅನಾನುಕೂಲವಾಗಲಿದೆ  ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರವು ಮನವಿಗೆ ಮಣಿದು ಹಿಂದೆ ಇದ್ದಂತೆ ರಜಾ ದಿನಗಳನ್ನು ಮುಂದುವರಿಸುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ.